ಮುಂಬೈ: ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ಮೈತ್ರಿ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್‌ನ ಶಾಸಕ ವಿಶ್ವಬಂಧು ರಾಯ್‌ಅವರು ಸರ್ಕಾರದ ವಿರುದ್ಧವೇ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರದ ಸಾಕಿನಾಕ ಎಂಬಲ್ಲಿ ಇತ್ತೀಚೆಗೆ ನಡೆದಿದ್ದ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ತಳೆದಿರುವ ನಿಲುವನ್ನು ಅವರು ಆಕ್ಷೇಪಿಸಿದ್ದಾರೆ.
‘ಮಹಾರಾಷ್ಟ್ರದ ಮುಖ್ಯಮಂತ್ರಿ ಪ್ರಾದೇಶಿಕ ಪಕ್ಷವೊಂದರ ಮುಖ್ಯಸ್ಥರು. ಅವರ ಆಲೋಚನೆಗಳು ಪ್ರಾದೇಶಿಕವಾದವನ್ನು ಪ್ರತಿಪಾದಿಸುತ್ತವೆ. ಸಾಕಿನಾಕ ಅತ್ಯಾಚಾರ ಪ್ರಕರಣದಲ್ಲಿ ಬೇರೆ ರಾಜ್ಯದವರನ್ನು ಅವರು ಗುರಿಯಾಗಿಸುತ್ತಾರೆ. ಅವರ ನಿಲುವು ತಮ್ಮ ವೋಟ್ ಬ್ಯಾಂಕ್ ಅನ್ನು ಸಂತುಷ್ಟಿಗೊಳಿಸುವುದೇ ಆಗಿರುತ್ತದೆ,’ ಎಂದು ರಾಯ್ ಆರೋಪಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಪತ್ರ ಬರೆದಿದ್ದೇಕೆ ಕಾಂಗ್ರೆಸ್ ಶಾಸಕ?
ಅತ್ಯಾಚಾರ ಪ್ರಕರಣದ ಕುರಿತಂತೆ ಶಿವಸೇನೆಯ ಮುಖವಾಣಿ ಸಮ್ನಾ ಸೋಮವಾರ ಸಂಪಾದಕೀಯ ಬರೆದಿತ್ತು. ಅದರಲ್ಲಿ ಆರೋಪಿಯ ಬಗ್ಗೆ ಪ್ರಸ್ತಾಪಿಸುತ್ತಾ, ‘ಸಂತ್ರಸ್ತೆಯನ್ನು ರಕ್ಷಿಸಲು ವೈದ್ಯರು ಸಾಕಷ್ಟು ಪ್ರಯತ್ನಿಸಿದರು, ಆದರೆ ಆಕೆ ಮೃತಪಟ್ಟರು. ಆರೋಪಿಯನ್ನು ಉತ್ತರ ಪ್ರದೇಶದ ಜೌನ್ಪುರದ ಮೋಹನ್ ಚೌಹಾಣ್ ಎಂದು ಗುರುತಿಸಲಾಗಿದೆ. ಪ್ರಕರಣದ ಆಳ ತನಿಖೆ ನಡೆಸಿದರೆ, ‘ಜೌನ್‌ಪುರ್ ಮಾದರಿ’ಯು ಎಂಥ ಕೊಳಕುತನದ್ದು ಎಂಬುದು ಯಾರಿಗಾದರೂ ಅರಿವಾಗುತ್ತದೆ. ಬಿಜೆಪಿಯು ಇದಕ್ಕಾಗಿ ಬಾರಿ ಕಣ್ಣೀರು ಹಾಕಿದೆ, ಪ್ರತಿಭಟನೆಯನ್ನೂ ಮಾಡಿದೆ,’ ಎಂದು ಬರೆದಿತ್ತು.
ಮಹಿಳೆಯರ ಮೇಲಿನ ಇತ್ತೀಚಿನ ದೌರ್ಜನ್ಯ, ಅಪರಾಧ ಪ್ರಕರಣವು ಮಹಾರಾಷ್ಟ್ರದ ಸಂಸ್ಕೃತಿಯ ಮೇಲಿನ ದಾಳಿ ಮತ್ತು ಕಳಂಕ ಎಂದು ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನೆ ಬರೆದುಕೊಂಡಿತ್ತು.
ಈ ವಿಚಾರ ಮಹಾರಾಷ್ಟ್ರದಲ್ಲಿ ಚರ್ಚೆ, ವಾದ–ವಿವಾದ ಹುಟ್ಟು ಹಾಕಿದೆ. ಅಪರಾಧಿ ಅಪರಾಧಿಯೇ. ಅಪರಾಧಿಯನ್ನು ಯಾವುದೇ ರಾಜ್ಯದ ಹಿನ್ನೆಲೆಯಲ್ಲಿ ನೋಡಬಾರದು ಎಂಬ ಟೀಕೆಗಳು ವ್ಯಕ್ತವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.