ನವದೆಹಲಿ: ಕಾಂಗ್ರೆಸ್ ವಕ್ತಾರೆಯಾಗಿದ್ದ ಖುಷ್ಬೂ ಸುಂದರ್ ಅವರು ಆ ಪಕ್ಷ ತೊರೆದು ಬಿಜೆಪಿಗೆ ಸೋಮವಾರ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ನ ಮಾಧ್ಯಮ ವಿಭಾಗಕ್ಕೆ ಒಂದೂವರೆ ವರ್ಷದಲ್ಲಿ ಬಿದ್ದ ನಾಲ್ಕನೇ ದೊಡ್ಡ ಹೊಡೆತ ಇದು.
ಕಾಂಗ್ರೆಸ್ ಪಕ್ಷದ ಒಲವು ನಿಲುವುಗಳನ್ನು ಸುದ್ದಿ ವಾಹಿನಿಗಳಲ್ಲಿ ಸಮರ್ಥವಾಗಿ ಪ್ರತಿಪಾದಿಸುತ್ತಿದ್ದ ಪ್ರಿಯಾಂಕಾ ಚತುರ್ವೇದಿ ಅವರು 2019ರ ಏಪ್ರಿಲ್‌ನಲ್ಲಿ ಕಾಂಗ್ರೆಸ್ ತೊರೆದು ಶಿವಸೇನಾ ಸೇರಿದ್ದರು. ಆಗ, ಶಿವಸೇನಾ ಎನ್‌ಡಿಎಯ ಭಾಗವಾಗಿತ್ತು. ಬಳಿಕ, ಪ್ರಿಯಾಂಕಾ ಅವರನ್ನು ರಾಜ್ಯಸಭೆಯ ಸದಸ್ಯೆಯನ್ನಾಗಿ ಆಯ್ಕೆ ಮಾಡಲಾಗಿತ್ತು. ಈಗ, ಬಿಜೆಪಿ ಸೇರಿರುವ ಖುಷ್ಬೂ ಅವರಿಗೂ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುನ್ನ, ರಾಜ್ಯಸಭೆಯಲ್ಲಿ ಸ್ಥಾನ ಕಲ್ಪಿಸಲಾಗುವುದು ಎಂಬ ವದಂತಿ ದಟ್ಟವಾಗಿದೆ. ವಿಧಾನಸಭೆ ಚುನಾವಣೆಗೆ ಇನ್ನು ಎಂಟು ತಿಂಗಳಷ್ಟೇ ಬಾಕಿ.
ಇಬ್ಬರು ವಕ್ತಾರೆಯರು ಕಾಂಗ್ರೆಸ್ ಬಿಟ್ಟ ರೀತಿಯಲ್ಲಿಯೂ ಹಲವು ಸಾಮ್ಯಗಳಿವೆ. ಪ್ರಿಯಾಂಕಾ ಮತ್ತು ಖುಷ್ಬೂ ಅವರಿಬ್ಬರೂ ಕಾಂಗ್ರೆಸ್‌ನಲ್ಲಿದ್ದಾಗ ಬಿಜೆಪಿ ವಿರುದ್ಧ ತೀವ್ರವಾದ ವಾಗ್ದಾಳಿ ನಡೆಸಿದ್ದರು. ಎನ್‌ಡಿಎಯಿಂದ ಶಿವಸೇನಾ ಹೊರಬಂದ ಕಾರಣ ಪ್ರಿಯಾಂಕಾ ಅವರು ತಮ್ಮ ಬಿಜೆಪಿ ವಿರೋಧಿ ನಿಲುವುಗಳಿಂದಾಗಿ ಹೆಚ್ಚು ಮುಜುಗರ ಅನುಭವಿಸಬೇಕಾಗಿ ಬರಲಿಲ್ಲ. ಆದರೆ, ಖುಷ್ಬೂ ಅವರು ಬಿಜೆಪಿ ಪರವಾಗಿ ಮಾತನಾಡಿದಾಗಲೆಲ್ಲ, ಹಿಂದೆ ಅವರು ಬಿಜೆಪಿ ವಿರುದ್ಧ ಆಡಿದ್ದ ಮಾತುಗಳನ್ನು ವಿರೋಧ ಪಕ್ಷಗಳ ವಕ್ತಾರರು ಉಲ್ಲೇಖಿಸಬಹುದು.
2019ರ ಮಾರ್ಚ್‌ನಲ್ಲಿ ಬಿಜೆಪಿ ಸೇರಿದ್ದ ಟಾಮ್ ವಡಕ್ಕನ್ ಅವರು ಸೋನಿಯಾ ಗಾಂಧಿ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು. ಹಲವು ವರ್ಷ ಅವರು ಕಾಂಗ್ರೆಸ್ ಮಾಧ್ಯಮ ವಿಭಾಗದ ಕಾರ್ಯದರ್ಶಿಯಾಗಿದ್ದರು. ಎರಡು ದಶಕ ಕಾಂಗ್ರೆಸ್‌ನಲ್ಲಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಗುಣಗಳನ್ನು ಶ್ಲಾಘಿಸಿ, ಬಳಿಕ ಬಿಜೆಪಿ ಸೇರಿದ್ದರು.
ಖುಷ್ಬೂ, ಪ್ರಿಯಾಂಕಾ ಮತ್ತು ಟಾಮ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಳಿಕ ಆ ಪಕ್ಷದ ನಾಯಕತ್ವದ ವಿರುದ್ಧ ಹರಿಹಾಯ್ದಿದ್ದಾರೆ. ‘ತಳಮಟ್ಟದ ವಾಸ್ತವದ ಅರಿವೇ ಇಲ್ಲದ ಕೇಂದ್ರ ಮಟ್ಟದ ಕೆಲವು ನಾಯಕರು ಸರ್ವಾಧಿಕಾರ ತೋರುತ್ತಿದ್ದಾರೆ. ನಿಜವಾಗಿಯೂ ಕೆಲಸ ಮಾಡುವವರನ್ನು ಮೂಲೆಗುಂಪು ಮಾಡಲಾಗುತ್ತಿದೆ’ ಎಂದು ರಾಜೀನಾಮೆ ಪತ್ರದಲ್ಲಿ ಖುಷ್ಬೂ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿಲ್ಲ ಎಂಬುದು ಪ್ರಿಯಾಂಕಾ ಅವರ ಸಿಟ್ಟಿಗೆ ಕಾರಣವಾಗಿತ್ತು. ಅವರ ವಿರುದ್ಧ ‘ಅವಹೇಳನಕಾರಿ ಹೇಳಿಕೆ’ ನೀಡಿದ್ದ ಪಕ್ಷದ ಕೆಲವು ಕಾರ್ಯಕರ್ತರನ್ನು ಅಮಾನತು ಮಾಡಲಾಗಿತ್ತು. ಆದರೆ, ಕೆಲ ಕಾಲದ ಬಳಿಕ ಅವರ ಸ್ಥಾನಗಳ ಮರುಸ್ಥಾಪನೆ ಆಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಪ್ರಿಯಾಂಕಾ ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್‌ನ ಅಧಿಕಾರ ಕೇಂದ್ರ ಯಾವುದೆಂದೇ ತಿಳಿಯುತ್ತಿಲ್ಲ ಎಂದು ಆರೋಪಿಸಿದ್ದ ಟಾಮ್ ವಡಕ್ಕನ್, ಪಕ್ಷಕ್ಕೆ ನಿಷ್ಠರಾಗಿರುವ ತಮ್ಮಂತಹ ನಾಯಕರನ್ನು ‘ಬಳಸಿ ಬಿಸಾಕುವ’ ಮನೋಭಾವ ಪಕ್ಷದಲ್ಲಿ ಇದೆ ಎಂದು ಹೇಳಿದ್ದರು.
ಸಂಜಯ್ ಝಾ ಅವರನ್ನು ಪಕ್ಷದ ವಕ್ತಾರ ಹುದ್ದೆಯಿಂದ ಈ ಜುಲೈನಲ್ಲಿ ತೆಗೆಯಲಾಗಿತ್ತು. ಪಕ್ಷದ ಕಾರ್ಯನಿರ್ವಹಣೆ ಬಗ್ಗೆ ಪತ್ರಿಕೆಯೊಂದಕ್ಕೆ ವಿಮರ್ಶಾತ್ಮಕ ಲೇಖನ ಬರೆದ ಕಾರಣಕ್ಕೆ ವಕ್ತಾರ ಹುದ್ದೆಯಿಂದ ಅವರನ್ನು ವಜಾ ಮಾಡಲಾಗಿತ್ತು.
ಕಾಂಗ್ರೆಸ್ ವಕ್ತಾರೆಯಾಗಿದ್ದ ಜಯಂತಿ ನಟರಾಜನ್ ಅವರು 2015ರ ಜನವರಿಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರದಲ್ಲಿ ಅವರು ತಮ್ಮ ಆಕ್ರೋಶವನ್ನೂ ತೋಡಿಕೊಂಡಿದ್ದರು. 2013ರಲ್ಲಿ ತಮ್ಮನ್ನು ಕೇಂದ್ರ ಪರಿಸರ ಸಚಿವೆ ಸ್ಥಾನದಿಂದ ತೆಗೆದಿದ್ದು ಏಕೆ ಎಂದು ಪ್ರಶ್ನಿಸಿದ್ದರು. ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿ ಇತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ.
ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಭಾಗದ ಮಾಜಿ ಅಧ್ಯಕ್ಷ ಜನಾರ್ದನ ದ್ವಿವೇದಿ ಅವರು ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ. ಅವರ ಮಗ ಸಮೀರ್ ದ್ವಿವೇದಿ ಈ ಫೆಬ್ರುವರಿಯಲ್ಲಿ ಬಿಜೆಪಿ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.