ADVERTISEMENT

ಪ್ರಣಾಳಿಕೆ ಬಗ್ಗೆ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಖಂಡನೆ: ಚುನಾವಣಾ ಆಯೋಗಕ್ಕೆ ದೂರು

ಡೆಕ್ಕನ್ ಹೆರಾಲ್ಡ್
Published 8 ಏಪ್ರಿಲ್ 2024, 11:41 IST
Last Updated 8 ಏಪ್ರಿಲ್ 2024, 11:41 IST
   

ದೆಹಲಿ: ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕರ ನಿಯೋಗವು ಸೋಮವಾರ ಮೋದಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಈ ಬಗ್ಗೆ ಮಾತನಾಡಿದ ಕಾಂಗ್ರೆಸ್​​ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್‌, 'ಪ್ರಧಾನಿ ತಮ್ಮ ಭಾಷಣಗಳಲ್ಲಿ, ವಿಶೇಷವಾಗಿ ನಮ್ಮ ಪ್ರಣಾಳಿಕೆಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯಿಂದ ನಮಗೆ ತೀವ್ರ ಬೇಸರವಾಗಿದೆ. ನೀವು ಪಕ್ಷದೊಂದಿಗೆ ಭಿನ್ನಾಭಿಪ್ರಾಯ ಹೊಂದಿರಬಹುದು, ನೀವು ಅದನ್ನು ಟೀಕಿಸಬಹುದು ಆದರೆ ರಾಷ್ಟ್ರೀಯ ಪಕ್ಷದ ಪ್ರಣಾಳಿಕೆ ಬಗ್ಗೆ ಹೀಗೆ ಹೇಳುವುದು ಸರಿಯಲ್ಲ' ಎಂದಿದ್ದಾರೆ.

ಅಲ್ಲದೇ ಈ ವಿಷಯವನ್ನು ಚುನಾವಣಾ ಆಯೋಗದ ಮುಂದೆ ಇಟ್ಟಿದ್ದೇವೆ ಮತ್ತು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ಖುರ್ಷಿದ್ ಎಎನ್‌ಐಗೆ ತಿಳಿಸಿದ್ದಾರೆ.

ADVERTISEMENT

'ನನ್ನ ಸಹೋದ್ಯೋಗಿಗಳಾದ ಸಲ್ಮಾನ್ ಖುರ್ಷಿದ್, ಮುಕುಲ್ ವಾಸ್ನಿಕ್, ಪವನ್‌ ಖೇರಾ ಮತ್ತು ಗುರುದೀಪ್ ಸಪ್ಪಲ್ ಅವರು ಚುನಾವಣಾ ಆಯೋಗಕ್ಕೆ ಭೇಟಿ ನೀಡಿ 6 ​​ದೂರುಗಳನ್ನು ನೀಡಿದ್ದಾರೆ. ಚುನಾವಣಾ ಆಯೋಗ ಎಲ್ಲರಿಗೂ ಸಮಾನ ವೇದಿಕೆಯನ್ನು ನೀಡಬೇಕು. ಆಯೋಗವು ಸಾಂವಿಧಾನಿಕವಾಗಿ ನಡೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್​​ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮೋದಿ ಹೇಳಿದ್ದೇನು?

ಉತ್ತರ ಪ್ರದೇಶದ ಸಹರಾನಪುರದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಪ್ರಣಾಳಿಕೆ ಸಂಪೂರ್ಣವಾಗಿ ಮುಸ್ಲಿಂ ಲೀಗ್‌ನ ಚಿಂತನೆಗಳನ್ನು ಹೊಂದಿದೆ ಎಂದು ಹೇಳಿದ್ದರು.

'ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇದ್ದ ಕಾಂಗ್ರೆಸ್‌ ಪಕ್ಷ, ದಶಕಗಳ ಹಿಂದೆಯೇ ಅಂತ್ಯಕಂಡಿದೆ. ಆಗ ಮುಸ್ಲಿಂ ಲೀಗ್‌ ಹೊಂದಿದ್ದ ಚಿಂತನೆಗಳು, ಈಗಿನ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಪ್ರತಿಫಲಿಸುತ್ತಿವೆ' ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.