ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಜನಿಸಿದ್ದು ಗೋಪಾಲಗಂಜ್ ಜಿಲ್ಲೆಯಲ್ಲಿ. ಪ್ರತಿವರ್ಷವೂ ಸಂಭವಿಸುವ ಪ್ರವಾಹದ ಕಾರಣಕ್ಕೂ ಬಿಹಾರದ ಈ ಜಿಲ್ಲೆ ಹೆಸರುವಾಸಿಯಾಗಿದೆ. ಆದರೆ ಈಗ, ಕಾಂಗ್ರೆಸ್ ಶಾಸಕ ಅನಿಲ್ ಕುಮಾರ್ ಅವರ ಒಂದು ನಿರ್ಧಾರದ ಕಾರಣದಿಂದ ಈ ಜಿಲ್ಲೆ ಸುದ್ದಿಯಲ್ಲಿದೆ.
ಕಾಂಗ್ರೆಸ್‌ನ ಹಾಲಿ ಶಾಸಕರಾಗಿರುವ ಅನಿಲ್ ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ. ಸೋಲಿನ ಭಯ, ಪಕ್ಷದ ವರಿಷ್ಠರ ಮೇಲಿನ ಅಸಮಾಧಾನ, ವಯಸ್ಸಾಗಿರುವುದು ಇವು ಯಾವುವೂ ಸುನಿಲ್ ಅವರ ಈ ನಿರ್ಧಾರಕ್ಕೆ ಕಾರಣವಲ್ಲ. ಬದಲಿಗೆ, ಅವರು ತಮ್ಮ ಕ್ಷೇತ್ರವನ್ನು ಜೆಡಿಯು ಅಭ್ಯರ್ಥಿಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ. ಜೆಡಿಯು ಪಕ್ಷವು ಅನಿಲ್ ಅವರ ತಮ್ಮ ಸುನಿಲ್ ಕುಮಾರ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕೆ ಇಳಿಸುವುದಾಗಿ ಘೋಷಿಸಿದೆ.
ಇತ್ತೀಚೆಗೆ ನಿವೃತ್ತಿ ಹೊಂದಿರುವ, 1987ನೇ ತಂಡದ ಐಪಿಎಸ್ ಅಧಿಕಾರಿ ಸುನಿಲ್ ಅವರು, ಎರಡು ತಿಂಗಳ ಹಿಂದೆಯಷ್ಟೇ ಜೆಡಿಯು ಸೇರಿದ್ದರು. ಅವರನ್ನು ಗೋಪಾಲಗಂಜ್ ಜಿಲ್ಲೆಯ ಭೋರೆ ಕ್ಷೇತ್ರದಿಂದ ಅಣ್ಣನ ವಿರುದ್ಧವೇ ಕಣಕ್ಕಿಳಿಸಲು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ತೀರ್ಮಾನಿಸಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಜೆಡಿಯು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಘೋಷಿಸಿತ್ತು. ಇದರಿಂದಾಗಿ ಈ ಮೀಸಲು ಕ್ಷೇತ್ರದಲ್ಲಿ ತಮ್ಮನ ವಿರುದ್ಧವೇ ಸ್ಪರ್ಧಿಸಬೇಕಾದ ಅನಿವಾರ್ಯ ಅನಿಲ್ ಅವರಿಗೆ ಎದುರಾಯಿತು. ಕೆಲವು ದಿನಗಳ ಕಾಲ ಸಂಕಟ ಅನುಭವಿಸಿದ ಅನಿಲ್ ಅವರು, ತಮ್ಮನ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ, ತಾವೇ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿ, ಪಕ್ಷದ ಹೈಕಮಾಂಡ್‌ಗೆ ಆ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಹಾಘಟಬಂಧನದಲ್ಲಿ ಆಗಿರುವ ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಈ ಕ್ಷೇತ್ರವು ಈಗ ರಾಜ್ಯದ ಪ್ರಭಾವಿ ಎಡಪಕ್ಷವಾಗಿರುವ ಸಿಪಿಐ–ಎಂಎಲ್ ಪಾಲಿಗೆ ಹೋಗಿದೆ. ಈ ಪಕ್ಷ ಈಚೆಗಷ್ಟೇ ಘಟಬಂಧನವನ್ನು ಸೇರಿಕೊಂಡಿದೆ.
52 ಸಾವಿರ ಅಂಚೆ ಮತದಾರರು
ಬಿಹಾರ ವಿಧಾನಸಭೆಗೆ ಇದೇ ತಿಂಗಳ 28ರಂದು ನಡೆಯಲಿರುವ ಮೊದಲ ಹಂತದ ಮತದಾನದಲ್ಲಿ 52,000 ಮಂದಿ ಅಂಚೆ ಮೂಲಕ ಮತಚಲಾಯಿಸಲು ಮುಂದಾಗಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕೋವಿಡ್–19 ಕಾರಣದಿಂದ ಬಿಹಾರ ಚುನಾವಣೆಯ ಸಂದರ್ಭದಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಆಯೋಗ ಮುಂದಾಗಿದೆ.
80 ವರ್ಷ ವಯಸ್ಸಿಗೂ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರಲ್ಲಿ ಹಲವರು ಅಂಚೆ ಮೂಲಕ ಮತದಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ವರ್ಗಕ್ಕೆ ಸೇರಿದ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಈಗಾಗಲೇ ಸಂಪರ್ಕಿಸಿದ್ದಾರೆ. ಅವರಲ್ಲಿ 52,000 ಮಂದಿ ಅಂಚೆ ಮೂಲಕ ಮತದಾನಕ್ಕೆ ಒಲವು ತೋರಿದ್ದಾರೆ ಎಂದು ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರಿ ನೌಕರರಿಗೆ ನೀಡುವ ಅಂಚೆ ಮತಪತ್ರಗಳಿಗಿಂತ ಈ ಮತಪತ್ರಗಳು ಭಿನ್ನವಾಗಿರುತ್ತವೆ. ಈ ಸೌಲಭ್ಯ ಆಯ್ಕೆ ಮಾಡಿಕೊಳ್ಳುವವರು ಮೊದಲು ಒಂದು ಅರ್ಜಿ ನಮೂನೆಯನ್ನು ತುಂಬಿಕೊಡಬೇಕಾಗುತ್ತದೆ. ಇಂಥವರಿಗೆ ಪೂರ್ವ ನಿಗದಿತ ದಿನದಂದು ಮತಪತ್ರಗಳನ್ನು ಕಳುಹಿಸಲಾಗುವುದು. ಪಾರದರ್ಶಕತೆಯನ್ನು ಖಚಿತಪಡಿಸಲು, ಇಡೀ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ ನಡೆಸಲಾಗುವುದು. ಮುಂದಿನ ಹಂತದ ಮತದಾನಗಳಲ್ಲೂ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು’ ಎಂದು ಆಯೋಗ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.