ADVERTISEMENT

ವಿಜಯವರ್ಗೀಯ ‘ಶೂರ್ಪನಖಿ‘ ಹೇಳಿಕೆ ಸಮರ್ಥಿಸಿಕೊಂಡ ದಿಗ್ವಿಜಯ್‌ ಸಿಂಗ್‌ ಸಹೋದರ

ಪಿಟಿಐ
Published 10 ಏಪ್ರಿಲ್ 2023, 10:14 IST
Last Updated 10 ಏಪ್ರಿಲ್ 2023, 10:14 IST
ಲಕ್ಷ್ಮಣ್‌ ಸಿಂಗ್‌ (ಚಿತ್ರ ಕೃಪೆ: Twitter/@laxmanragho)
ಲಕ್ಷ್ಮಣ್‌ ಸಿಂಗ್‌ (ಚಿತ್ರ ಕೃಪೆ: Twitter/@laxmanragho)   

ಮಧ್ಯಪ್ರದೇಶ : ಹೆಣ್ಣು ಮಕ್ಕಳ ಬಟ್ಟೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಅವರ ‘ಶೂರ್ಪನಖಿ‘ ಹೇಳಿಕೆಯನ್ನು ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ, ದಿಗ್ಜಿಜಯ್‌ ಸಿಂಗ್‌ ಅವರ ಸಹೋದರ ಲಕ್ಷ್ಮಣ್‌ ಸಿಂಗ್‌ ಸಮರ್ಥಿಸಿಕೊಂಡಿದ್ದಾರೆ. ಭಾನುವಾರ ಟ್ವೀಟ್‌ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್‌ 6ರಂದು ಇಂದೋರ್‌ನಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಕೈಲಾಶ್‌ ವಿಜಯವರ್ಗೀಯ ‘ಅರೆಬರೆ ಬಟ್ಟೆ ಧರಿಸುವ ಯುವತಿಯರು ರಾಮಾಯಣದಲ್ಲಿ ಬರುವ ರಾಕ್ಷಸಿ ಶೂರ್ಪನಖಿಯಂತೆ ಕಾಣುತ್ತಾರೆ‘ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವರ್ಗೀಯ ಅವರನ್ನು ‘ಸ್ತ್ರೀ ವಿರೋಧಿ‘ ಎಂದು ಕೆಲವರು ಕರೆದಿದ್ದರು. ರಾಜ್ಯ ಕಾಂಗ್ರೆಸ್‌ ಘಟಕ ವಿಜಯವರ್ಗೀಯ ಕ್ಷಮೆಗೆ ಆಗ್ರಹಿಸಿ ಭೋಪಾಲ್‌ ಮತ್ತು ಇಂದೋರ್‌ನಲ್ಲಿ ಪ್ರತಿಭಟನೆ ಮಾಡಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕಾಂಗ್ರೆಸ್‌ ನಾಯಕ ಲಕ್ಷಣ್‌ ಸಿಂಗ್‌ ಹೇಳಿಕೆ ಸಮರ್ಥಿಸಿಕೊಂಡಿದ್ದು, ಟೀಕೆಗೆ ಗ್ರಾಸವಾಗಿದೆ.

ಶೂರ್ಪನಖಿ ಹೇಳಿಕೆ ಸಂಬಂಧ ಭಾನುವಾರ ಟ್ವೀಟ್ ಮಾಡಿರುವ ಲಕ್ಷ್ಮಣ್‌ ಸಿಂಗ್‌, ‘ಕೈಲಾಶ್ ಅವರ ‘ಶೂರ್ಪನಖಿ‘ ಹೇಳಿಕೆಯನ್ನು ಕೇಳಿದೆ. ಒಂದರ್ಥದಲ್ಲಿ ಇದು ನಿಜ. ಇಂದೋರ್ ಅಹಲ್ಯಾದೇವಿಯ ನಗರವಾಗಿದ್ದು ಸಂಸ್ಕಾರದ ಬೀಡಾಗಿದೆ. ಇಲ್ಲಿ ಉಡುಪುಗಳ ಬಗ್ಗೆ ಗಮನಹರಿಸಬೇಕಾಗಿದೆ. ಆದರೆ, ಕೈಲಾಶ್ ಅವರೇ ನೀವು ಇಂದೋರ್‌ನ ಕಿರೀಟವಿಲ್ಲದ ರಾಜ. ಇದು ಹೇಗೆ ನಡೆಯಲು ಸಾಧ್ಯ?’ ಎಂದು ಕೈಲಾಶ್‌ ಹೇಳಿಕೆಗೆ ಬೆಂಬಲ ನೀಡಿದ್ದಾರೆ.

ADVERTISEMENT

ಐದು ಬಾರಿ ಲೋಕಸಭಾ ಸಂಸದರಾಗಿರುವ ಲಕ್ಷ್ಮಣ್ ಸಿಂಗ್, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕ ದ್ವಿಗಿಜಯ್‌ ಸಿಂಗ್‌ ಅವರ ಕಿರಿಯ ಸಹೋದರರಾಗಿದ್ದಾರೆ. 2003ರಲ್ಲಿ ಬಿಜೆಪಿ ಸೇರಿದ ಲಕ್ಷ್ಮಣ್‌ ಸಿಂಗ್‌ 2009ರಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೇಸ್‌ಗೆ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.