ನವದೆಹಲಿ: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಘಟನೆಗೆ ಸಂಬಂಧಿಸಿದಂತೆ ವಯನಾಡು ಮಾಜಿ ಸಂಸದ ರಾಹುಲ್ ಗಾಂಧಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಮೃತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
‘ವಯನಾಡಿನ ಮೆಪ್ಪಾಡಿ ಬಳಿ ಸಂಭವಿಸಿದ ಭಾರಿ ಭೂಕುಸಿತದಿಂದ ನಾನು ತೀವ್ರ ನೊಂದಿದ್ದೇನೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಮಣ್ಣಿನಡಿ ಸಿಲುಕಿರುವವರನ್ನು ಆದಷ್ಟು ಬೇಗ ಸುರಕ್ಷಿತವಾಗಿ ಕರೆತರಲಾಗುವುದು ಎಂದು ನಂಬುತ್ತೇನೆ’ಎಂದು ರಾಹುಲ್ ಹೇಳಿದ್ದಾರೆ.
ಕೇರಳ ಮುಖ್ಯಮಂತ್ರಿ ಮತ್ತು ವಯನಾಡು ಜಿಲ್ಲಾಧಿಕಾರಿ ಜೊತೆ ದೂರವಾಣಿ ಮಾತನಾಡಿದ್ದೇನೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿರುವುದಾಗಿ ರಾಹುಲ್ ಹೇಳಿದ್ದಾರೆ.
‘ಸಂಬಂಧಪಟ್ಟ ಎಲ್ಲ ಸಂಸ್ಥೆಗಳ ಜೊತೆ ಸಮನ್ವಯ ಸಾಧಿಸಿ ಕಂಟ್ರೋಲ್ ರೂಂ ರಚನೆಗೆ ಮನವಿ ಮಾಡಿದ್ದೇನೆ. ಪರಿಹಾರ ಕಾರ್ಯಕ್ಕೆ ಯಾವುದೇ ನೆರವು ಬೇಕಾದರೂ ಸಂಪರ್ಕಿಸುವಂತೆ ಸೂಚಿಸಿದ್ದೇನೆ. ಕೇಂದ್ರ ಸಚಿವರ ಜೊತೆ ಮಾತನಾಡಿ, ವಯನಾಡಿಗೆ ಅಗತ್ಯವಿರುವ ಎಲ್ಲ ನೆರವು ನಿಡುವಂತೆ ಒತ್ತಾಯಿಸುತ್ತೇನೆ’ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೆ, ರಕ್ಷಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ಜಿಲ್ಲಾಡಳಿತಕ್ಕೆ ನೆರವು ನೀಡುವಂತೆ ಯುಡಿಎಫ್ ಕಾರ್ಯಕರ್ತರಿಗೆ ಅವರು ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.