ADVERTISEMENT

ಪ್ರಧಾನಿ, ಠಾಕೂರ್‌ ಭಾಷಣಗಳು ವಾಸ್ತವಿಕವಾಗಿಲ್ಲ: ಸ್ಪೀಕರ್‌ಗೆ ಕಾಂಗ್ರೆಸ್ MP ಪತ್ರ

ಪಿಟಿಐ
Published 4 ಜುಲೈ 2024, 13:21 IST
Last Updated 4 ಜುಲೈ 2024, 13:21 IST
<div class="paragraphs"><p>ಮಾಣಿಕಂ ಟಾಗೋರ್</p></div>

ಮಾಣಿಕಂ ಟಾಗೋರ್

   

– ಪಿಟಿಐ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಸದನದಲ್ಲಿ ವಾಸ್ತವವಲ್ಲದ, ತಪ್ಪಾದ ಹಾಗೂ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡಿದ್ದು, ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸಂಸದ ಮಾಣಿಕಂ ಟಾಗೋರ್ ಅವರು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ADVERTISEMENT

ನರೇಂದ್ರ ಮೋದಿ ಹಾಗೂ ಠಾಕೂರ್ ಅವರ ಹೇಳಿಕೆಗಳಿಗೆ ಸದನ ಕಾರ್ಯಕಲಾಪದ ನಿಯಮಗಳು ಸೆಕ್ಷನ್‌ 115 (1) ಅನ್ನು ಅನ್ವಯಿಸಿ ಎಂದು ಸ್ಪೀಕರ್‌ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸುವ ವೇಳೆ, ಮಹಿಳೆಯರಿಗೆ ಮಾಸಿಕ ₹8,500 ನೀಡುವುದಾಗಿ ಕಾಂಗ್ರೆಸ್ ಸುಳ್ಳು ಭರವಸೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಆದರೆ ಸರ್ಕಾರ ರಚನೆಯಾದರೆ ಮಾತ್ರ ಈ ಭರವಸೆ ಈಡೇರಿಸುವುದಾಗಿ ಕಾಂಗ್ರೆಸ್ ಹೇಳಿತ್ತು ಎಂದು ಟಾಗೋರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಿದ 16 ರಾಜ್ಯಗಳಲ್ಲಿ ಮತಪ್ರಮಾಣ ಕಡಿಮೆಯಾಗಿದೆ ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯೂ ವಾಸ್ತವವಾಗಿ ಸರಿಯಲ್ಲ. ಹಿಮಾಚಲ ಪ್ರದೇಶ, ಉತ್ತರಾಖಂಡ, ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಮತಗಳಿಕೆ ಹೆಚ್ಚಳವಾಗಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ಅವಧಿಯಲ್ಲಿ ಯೋಧರಿಗೆ ಬುಲೆಟ್‌ ಫ್ರೂಫ್ ಜಾಕೆಟ್ ನೀಡಿರಲಿಲ್ಲ ಎನ್ನುವ ಪ್ರಧಾನಿ ಮೋದಿಯವರ ಹೇಳಿಕೆ ತಪ್ಪುದಾರಿಗೆ ಎಳೆಯುವಂಥದ್ದು. ಆ ವೇಳೆ ಜಾಕೆಟ್‌ಗಳ ಕೊರತೆ ಇತ್ತೇ ವಿನಾ ಇರಲೇ ಇಲ್ಲ ಎನ್ನುವುದು ಸರಿಯಲ್ಲ. ಮುಂಬೈ ದಾಳಿಯ ವೇಳೆ ಪೊಲೀಸರಿಗೂ ಬುಲೆಟ್ ಫ್ರೂಪ್ ಜಾಕೆಟ್‌ಗಳಿದ್ದವು. ಅಲ್ಲದೇ ಭಾರತೀಯ ಸೇನೆಗೆ ಯುದ್ಧ ವಿಮಾನ ನೀಡಿರಲಿಲ್ಲ ಎನ್ನುವ ಪ್ರಧಾನಿ ಹೇಳಿಕೆಯೂ ಸರಿಯಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.

ಜುಲೈ 1ರಂದು ಅನುರಾಗ್ ಠಾಕೂರ್‌ ಅವರು ಭಾಷಣದ ವೇಳೆ, ‘ಕಾಂಗ್ರೆಸ್ ಪಕ್ಷವು ತನ್ನ ಆಡಳಿತಾವಧಿಯಲ್ಲಿ ಸೈನಿಕರಿಗೆ ಶಸ್ತ್ರಾಸ್ತ್ರ ಹಾಗೂ ಯುದ್ಧವಿಮಾನಗಳನ್ನು ನೀಡಿರಲಿಲ್ಲ’ ಎಂದು ಹೇಳಿದ್ದರು. ಇದೂ ಸತ್ಯವಲ್ಲ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಆ ವೇಳೆ ನಮ್ಮಲ್ಲಿ ಜಾಗ್ವಾರ್, ಮಿಗ್ 29, ಎಸ್‌.ಯು- 30, ಮಿರಾಜ್ 2000, ಪರಮಾಣು ಬಾಂಬ್‌ಗಳು, ಅಗ್ನಿ, ಪೃಥ್ವಿ, ಆಕಾಶ್, ನಾಗ್, ತ್ರಿಶೂಲ್ ಮತ್ತು ಬ್ರಹ್ಮೋಸ್‌ನಂತಹ ಕ್ಷಿಪಣಿಗಳು ಇದ್ದವು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.