ADVERTISEMENT

ಉದ್ಯೋಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಏರಿಕೆ: ಅಸಾಧಾರಣ ಕಟ್ಟುಕಥೆ; ಕಾಂಗ್ರೆಸ್‌

– ಬಿಜೆಪಿ ಸಮರ್ಥನೆ

​ಪ್ರಜಾವಾಣಿ ವಾರ್ತೆ
ಶಮಿನ್‌ ಜಾಯ್‌
Published 17 ನವೆಂಬರ್ 2024, 22:41 IST
Last Updated 17 ನವೆಂಬರ್ 2024, 22:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ‌‘ಸ್ಥಿರವಾದ ಏರಿಕೆ’ ದಾಖಲಿಸುತ್ತಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. 

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌, ‘ಗ್ರಾಮೀಣ ಭಾಗದಲ್ಲಿ ತೀವ್ರ ಆರ್ಥಿಕ ಸಂಕಷ್ಟದ ಹೊರತಾಗಿಯೂ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ ಎಂದು ತಿಳಿಸಿದೆ. ಆದರೆ, ‌ಗುಣಮಟ್ಟದ ಉದ್ಯೋಗಗಳಲ್ಲಿ ಮಹಿಳೆಯರ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗಿದ್ದು, ನೈಜ ವೇತನವೂ ತೀರಾ ಕಡಿಮೆಯಾಗಿದೆ. ಇದು ಮತ್ತೊಂದು ದುರಂತವಾಗಿದ್ದು, ಸರ್ಕಾರದ ಸುಳ್ಳು ನುಡಿಯಾಗಿದೆ’ ಎಂದು ಟೀಕಿಸಿದೆ. 

ನರೇಂದ್ರ ಮೋದಿ ಪ್ರಧಾನಿಯಾದ ನಂತರ ‘ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಅನುಪಾತ’ (ಎಲ್‌ಎಫ್‌ಪಿಆರ್‌) 2017–18ರಲ್ಲಿ ಶೇ 27ರಷ್ಟಿದ್ದು, 2023–24ರ ಅವಧಿಗೆ ಶೇ 41.7ಕ್ಕೆ ಏರಿಕೆಯಾಗಿದೆ ಎಂದು ಆರ್ಥಿಕ ದತ್ತಾಂಶಗಳಲ್ಲಿ ತಿಳಿಸಲಾಗಿದೆ. ಇದು ಕೇಂದ್ರ ಸರ್ಕಾರ ಸೃಷ್ಟಿಸಿದ ‘ಅದ್ಭುತ ಕಥೆ’ಯಾಗಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗ) ಜೈರಾಮ್‌ ರಮೇಶ್‌ ನಕ್ಷೆ ಸಹಿತ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ADVERTISEMENT

ಸಂಪೂರ್ಣ ಬೋಗಸ್‌: ‘ಗ್ರಾಮೀಣ ಭಾಗದಲ್ಲಿ ಉಂಟಾದ ಆರ್ಥಿಕ ಸಂಕಷ್ಟದಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೂ ಸ್ವ–ಉದ್ಯೋಗದ ಕ್ಷೇತ್ರದಲ್ಲಿ ಗ್ರಾಮೀಣ ಭಾಗದಲ್ಲಿ ಈ ಪ್ರಮಾಣವು ಶೇ 57.7ರಿಂದ ಶೇ 73.5ಕ್ಕೆ ಹೆಚ್ಚಿದ್ದು, ನಗರ ಭಾಗದಲ್ಲಿ ಶೇ 34.8ರಿಂದ ಶೇ 42.3ಕ್ಕೆ ಏರಿಕೆಯಾಗಿದೆ. ಆದರೆ ವೇತನರಹಿತ ಮನೆಕೆಲಸಗಳಲ್ಲಿ ತೊಡಗಿಸಿಕೊಂಡಿರುವವರ ಪ್ರಮಾಣವು ಕಳೆದ ಆರು ವರ್ಷಗಳಲ್ಲಿ ಶೇ 31.7ರಿಂದ ಶೇ 36.7ಕ್ಕೆ ಏರಿಕೆಯಾಗಿದೆ. ಆದರೆ, ಸರ್ಕಾರದ ಎಲ್‌ಎಫ್‌ಪಿಆರ್‌ ಪ್ರಮಾಣವು ಸಂಪೂರ್ಣ ಬೋಗಸ್‌ ಆಗಿದೆ’ ಎಂದು ವಿವರಿಸಿದ್ದಾರೆ. 

ಕೆಲಸ ಜಾಸ್ತಿ, ಸಂಬಳ ಕಡಿಮೆ: ‌‘ಯಾವುದೇ ಆಧುನಿಕ ಅರ್ಥ ವ್ಯವಸ್ಥೆಯೂ ಅಲ್ಲಿನ ಉದ್ಯೋಗಿಗಳ ರಚನಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ. ಮಹಿಳೆಯರು ಕಡಿಮೆ ವೇತನದ ಕೃಷಿ ಉದ್ಯೋಗದ ಬದಲಾಗಿ, ಉತ್ಪಾದನಾ, ಸೇವಾ ಕ್ಷೇತ್ರದತ್ತ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. 10 ವರ್ಷಗಳಲ್ಲಿ ಈ ಪರಿಸ್ಥಿತಿ ಕೂಡ ಸಂಪೂರ್ಣವಾಗಿ ಹಿಮ್ಮುಖವಾಗಿದೆ. ಕೃಷಿ ಕ್ಷೇತ್ರದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯು ಶೇ 73.2ರಿಂದ (2017–18) ಶೇ 76.9 (2023–24‌)ಕ್ಕೆ ಏರಿಕೆಯಾಗಿದೆ. ಸ್ವ–ಉದ್ಯೋಗದಲ್ಲಿರುವ ಮಹಿಳೆಯರ ಆದಾಯವು ಇದೇ ಅವಧಿಯಲ್ಲಿ ಮಾಸಿಕ ₹3073ರಿಂದ ₹1,342ಕ್ಕೆ ಕುಸಿದಿದೆ’ ಎಂದು ಹೇಳಿದ್ದಾರೆ.

ಜೈರಾಮ್‌ ರಮೇಶ್‌–ಪಿಟಿಐ ಚಿತ್ರ
ವೇತನ ಹಾಗೂ ಸ್ವ ಉದ್ಯೋಗಿ ಮಹಿಳೆಯರು ಆರು ವರ್ಷದ ಹಿಂದೆ ಪಡೆಯುತ್ತಿದ್ದ ವೇತನಕ್ಕಿಂತಲೂ ತೀರಾ ಕಡಿಮೆಯಾಗಿದೆ. ಇದು ಅಮೃತಕಾಲದ ಕಟು ವಾಸ್ತವ
ಜೈರಾಮ್‌ ರಮೇಶ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.