ADVERTISEMENT

ಚೀನಾ ಕುರಿತು ಮೋದಿ ಮೌನ ಮುರಿಯಲಿ: ಕಾಂಗ್ರೆಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:01 IST
Last Updated 19 ಜೂನ್ 2024, 14:01 IST
ಜೈರಾಮ್ ರಮೇಶ್ 
ಜೈರಾಮ್ ರಮೇಶ್    

ನವದೆಹಲಿ: ಚೀನಾ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೌನ ಮುರಿಯಬೇಕು ಎಂದು ಕಾಂಗ್ರೆಸ್‌ ಪಕ್ಷ ಬುಧವಾರ ಆಗ್ರಹಿಸಿದೆ.

‘ನಮ್ಮ ಗಡಿಯಲ್ಲಿ ಯಾರೂ ಪ್ರವೇಶಿಸಿಲ್ಲ ಇಲ್ಲವೇ ನಮ್ಮ ಗಡಿ ಒಳಗೆ ಯಾರೂ ಇಲ್ಲ’ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಗೆ ನಾಲ್ಕು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ಈ ಮಾತು ಹೇಳಿದೆ.

ಈ ಕುರಿತು ಪ್ರಕಟಣೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, 2020ರ ಜೂನ್‌ 15ರಂದು ಗಾಲ್ವಾನ್‌ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರ ಹತ್ಯೆಯಾದ ನಾಲ್ಕು ದಿನಗಳ ನಂತರ ಪ್ರಧಾನಿ ಮೋದಿ ಈ ರೀತಿ ಹೇಳಿಕೆ ನೀಡಿದ್ದರು ಎಂದಿದ್ದಾರೆ.

ADVERTISEMENT

‘ಮೋದಿ ಅವರ ಈ ಹೇಳಿಕೆಯು ಚೀನಾ ಪಾಲಿಗೆ ವರವಾಗಿದೆ. ತಾನು ಅತಿಕ್ರಮಣ ಮಾಡಿ ವಶಪಡಿಸಿಕೊಂಡಿರುವ ಭಾರತದ ಭೂಭಾಗದ ಮೇಲೆ ತನ್ನ ಹಕ್ಕು ಸಾಧಿಸಲು ಚೀನಾಕ್ಕೆ ಅನುಕೂಲವಾಗಿದೆ’ ಎಂದು ಕಾಂಗ್ರೆಸ್‌ ಹೇಳುತ್ತಿದೆ.

‘ಮೋದಿ ಈಗಲೂ ತಮ್ಮ ಮಾತಿನಲ್ಲಿ ನಂಬಿಕೆ ಹೊಂದಿದ್ದಾರೆಯೇ? ಭವಿಷ್ಯದ ದೃಷ್ಟಿಯಿಂದ ಡೆಪ್ಸಂಗ್ ಮ್ತು ಡೆಮ್‌ಚೊಕ್‌ನಲ್ಲಿ ಸಾವಿರಾರು ಚದರ ಕಿ.ಮೀ.ನಷ್ಟು ಪ್ರದೇಶದ ಮೇಲಿನ ನಿಯಂತ್ರಣವನ್ನು ಚೀನಾಕ್ಕೆ ಮೋದಿ ಬಿಟ್ಟುಕೊಟ್ಟಿದ್ದಾರಾ? ಹಲವು ದಶಕಗಳ ಅವಧಿಯಲ್ಲಿ ಆಗಿರುವ ಭಾರತದ ಗುಪ್ತಚರ ಸಂಸ್ಥೆ ಮತ್ತು ವ್ಯೂಹಾತ್ಮಕ ವೈಫಲ್ಯಕ್ಕೆ ಯಾರಾನ್ನಾದರೂ ಉತ್ತರದಾಯಿಯನ್ನಾಗಿ ಮಾಡಲಾಗುತ್ತದೆಯೇ’ ಎಂದು ಜೈರಾಮ್‌ ರಮೇಶ್‌ ಪ್ರಶ್ನಿಸಿದ್ದಾರೆ.

‘ಈ ವಿದ್ಯಮಾನವು ನಮ್ಮ ಹುತಾತ್ಮ ಯೋಧರಿಗೆ ಅವಮಾನಿಸಿದಂತೆ. ಅಲ್ಲದೇ, ಪೂರ್ವ ಲಡಾಖ್‌ನಲ್ಲಿನ 2 ಸಾವಿರ ಚದರಡಿ ಕಿ.ಮೀ.ನಷ್ಟು ಭಾರತೀಯ ಭೂಭಾಗದ ಮೇಲೆ ಚೀನಾ ಹೊಂದಿರುವ ನಿಯಂತ್ರಣವನ್ನು ಒಪ್ಪಿಕೊಂಡಂತಾಗಲಿದೆ. ಈ ಪ್ರದೇಶಗಳಿಗೆ ಭಾರತೀಯ ಯೋಧರು ಹೋಗಲು ಆಗುತ್ತಿಲ್ಲ. ಡೆಪ್ಸಂಗ್‌ ಪ್ರದೇಶದಲ್ಲಿನ ಐದು ಗಸ್ತು ಠಾಣೆಗಳತ್ತ ಭಾರತೀಯ ಯೋಧರು ಹೋಗುವುದಕ್ಕೆ ಚೀನಾ ಪಡೆಗಳು ತಡೆ ಒಡ್ಡುತ್ತಿವೆ’ ಎಂದೂ ಅವರು ಹೇಳಿದ್ದಾರೆ.

‘ಪ್ರಮುಖ ಭೂಭಾಗವನ್ನು ಶತ್ರು ರಾಷ್ಟ್ರವಾದ ಚೀನಾಕ್ಕೆ ಬಿಟ್ಟುಕೊಟ್ಟಿರುವುದು ನಮ್ಮ ಪಾಲಿಗೆ ದೊಡ್ಡ ನಷ್ಟ. ಭಾರತದ ನೆರೆ ರಾಷ್ಟ್ರವಾದ ಮಾಲ್ದೀವ್ಸ್‌ ಮೇಲೆ ತನ್ನ ಪ್ರಭಾವವನ್ನು ಚೀನಾ ಹೆಚ್ಚಿಸಿಕೊಂಡಿದೆ. ಇದರ ಪರಿಣಾಮವಾಗಿಯೇ ಮಾಲ್ದೀವ್ಸ್‌ನಿಂದ ತನ್ನ ಸೇನೆಯನ್ನು ವಾಪಸು ಕರೆಸಿಕೊಳ್ಳಬೇಕಾಯಿತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.