ನವದೆಹಲಿ: ರಾಹುಲ್ ಗಾಂಧಿ ಅಪರಾಧಿ ಎಂಬ ನ್ಯಾಯಾಲಯದ ತೀರ್ಪಿನ ವಿರುದ್ಧ ಬೀದಿಗಿಳಿಯಲು ಮತ್ತು ಇತರ ಪಕ್ಷಗಳೊಂದಿಗೆ ರಾಷ್ಟ್ರಪತಿಯನ್ನು ಭೇಟಿ ಮಾಡಲು ಕಾಂಗ್ರೆಸ್ ಕಾಂಗ್ರೆಸ್ ಪಕ್ಷ ನಿರ್ಧರಿಸಿದ್ದು, ಶುಕ್ರವಾರ ವಿಜಯ್ ಚೌಕ್‌ನಲ್ಲಿ ಪ್ರತಿಭಟನೆ ನಡೆಸಲಿದೆ.
ಮೋದಿ ಉಪನಾಮ ಟೀಕಿಸಿದ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆಯಾದ ಬೆನ್ನಲ್ಲೇ ಸಾಮೂಹಿಕ ಪ್ರತಿಭಟನೆ ಘೋಷಿಸಿರುವ ಕಾಂಗ್ರೆಸ್, ಈ ಪ್ರಕರಣವನ್ನು ಕಾನೂನುಬದ್ಧವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ಹೋರಾಡುವುದಾಗಿ ಹೇಳಿದೆ. ಶಿಕ್ಷೆಗೆ ಗುರಿಯಾದರೆ ರಾಹುಲ್ ಗಾಂಧಿ ಸಂಸದ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಕುರಿತು ಕಾನೂನು ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಕಾಂಗ್ರೆಸ್ ನಿರ್ಧರಿಸಿದೆ.
ತೀರ್ಪಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ನಿವಾಸದಲ್ಲಿ ಗುರುವಾರ ಪಕ್ಷದ ಹಿರಿಯ ಮುಖಂಡರು ಮತ್ತು ಸಂಸದರ ಸಭೆ ನಡೆಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಶುಕ್ರವಾರ ಇತರ ಪ್ರತಿಪಕ್ಷ ನಾಯಕರೊಂದಿಗೆ ಕಾಂಗ್ರೆಸ್ ಸಭೆ ನಡೆಸಲಿದೆ ಮತ್ತು ಸಂಸತ್ ಭವನದಿಂದ ವಿಜಯ್ ಚೌಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ ಎಂದು ಹೇಳಿದ್ದರು.
ವಿರೋಧ ಪಕ್ಷಗಳು ಶುಕ್ರವಾರ ಮಧ್ಯಾಹ್ನ ಅಧ್ಯಕ್ಷೆ ದ್ರೌಪದಿ ಮುರ್ಮು ಅವರೊಂದಿಗೆ ವಿಷಯವನ್ನು ಪ್ರಸ್ತಾಪಿಸಲು ಸಮಯ ಕೇಳಿವೆ. ಖರ್ಗೆ ಅವರ ನಿವಾಸದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪಕ್ಷದ ಮುಖ್ಯಸ್ಥರು ಎಲ್ಲಾ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ರಾಜ್ಯಗಳಲ್ಲಿ ಆಂದೋಲನಗಳನ್ನು ಯೋಜಿಸಲು ನಿರ್ಧರಿಸಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.