ADVERTISEMENT

ಕಾಂಗ್ರೆಸ್‌ ಪಾಳಯದಲ್ಲಿ ಚರ್ಚೆ: ಮಲ್ಲಿಕಾರ್ಜುನ ಖರ್ಗೆ ಗೆಲುವು ಖಚಿತ?

ಹಿಂದೆ ಸರಿಯುವ ಮಾತೇ ಇಲ್ಲ ಎಂದ ತರೂರ್

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 20:01 IST
Last Updated 30 ಸೆಪ್ಟೆಂಬರ್ 2022, 20:01 IST
ಮಲ್ಲಿಕಾರ್ಜುನ ಖರ್ಗೆ ಅವರು ನಾಮಪತ್ರ ಸಲ್ಲಿಸುವ ವೇಳೆ ದಿಗ್ವಿಜಯ ಸಿಂಗ್ (ಎಡತುದಿ) ಮತ್ತು ಅಶೋಕ್‌ ಗೆಹಲೋತ್ ಇದ್ದರು (ಎಡಚಿತ್ರ). ಶಶಿ ತರೂರ್ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು  –ಪಿಟಿಐ ಚಿತ್ರ
ಮಲ್ಲಿಕಾರ್ಜುನ ಖರ್ಗೆ ಅವರು ನಾಮಪತ್ರ ಸಲ್ಲಿಸುವ ವೇಳೆ ದಿಗ್ವಿಜಯ ಸಿಂಗ್ (ಎಡತುದಿ) ಮತ್ತು ಅಶೋಕ್‌ ಗೆಹಲೋತ್ ಇದ್ದರು (ಎಡಚಿತ್ರ). ಶಶಿ ತರೂರ್ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು  –ಪಿಟಿಐ ಚಿತ್ರ   

ನವದೆಹಲಿ/ಗುಂಡ್ಲುಪೇಟೆ: ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರೇ ಚುನಾಯಿತರಾಗುತ್ತಾರೆ ಎಂಬ ವಿಷಯ ಚರ್ಚೆಗೆ ಬಂದಿದೆ. ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿರುವ ಜೈರಾಮ್ ರಮೇಶ್ ಅವರು, ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯುತ್ತದೆಯೇ ಇಲ್ಲವೇ ಎಂಬುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದು ಚರ್ಚೆಗೆ ಕಾರಣವಾಗಿದೆ.ಆದರೆ, ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಮತ್ತೊಬ್ಬ ಅಭ್ಯರ್ಥಿ ಶಶಿ ತರೂರ್ ಸ್ಪಷ್ಟಪಡಿಸಿದ್ದಾರೆ.

ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿತ್ತು. ಈಗ ಖರ್ಗೆ, ಶಶಿ ತರೂರ್ ಮತ್ತು ಕೆ.ಎನ್‌.ತ್ರಿಪಾಠಿ ನಾಮಪತ್ರ ಸಲ್ಲಿಸಿದ್ದಾರೆ. ‘ಖರ್ಗೆ ಅವರಿಗೆ ಗಾಂಧಿ ಕುಟುಂಬದ ಬೆಂಬಲವಿದೆ. ಹೀಗಾಗಿ ಅವರೇ ಚುನಾವಣೆಯಲ್ಲಿ ಗೆಲ್ಲುತ್ತಾರೆ’ ಎಂದು ಪಕ್ಷದ ಮೂಲಗಳು ಹೇಳಿವೆ. ಆದರೆ ನಾವು ತಟಸ್ಥರಾಗಿ ಇರುತ್ತೇವೆ ಎಂದು ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ನಾಯಕ ರಾಹುಲ್ ಗಾಂಧಿ ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೂ, ಖರ್ಗೆ ಅವರೇ ಗೆಲ್ಲುತ್ತಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಕರ್ನಾಟಕದಲ್ಲಿ ‘ಭಾರತ್ ಜೋಡೊ ಯಾತ್ರೆ’ಯಲ್ಲಿರುವ ಜೈರಾಮ್‌ ರಮೇಶ್ ಅವರು ನೀಡಿರುವ ಹೇಳಿಕೆಯು ಇದನ್ನೇ ಪುಷ್ಟೀಕರಿಸುತ್ತದೆ. ‘ನಾಮಪತ್ರ ವಾಪಸ್‌ ಪಡೆಯಲು ಇನ್ನೂ ಸಾಕಷ್ಟು ಸಮಯಾವಕಾಶವಿದೆ. ಅಕ್ಟೋಬರ್ 17ರ ಚುನಾವಣೆ ನಡೆಯುತ್ತದೆಯೇ ಅಥವಾ ಇಲ್ಲವೇ ಎಂಬುದು ಗೊತ್ತಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಶಶಿ ತರೂರ್ ಅವರು ತಮ್ಮ ನಾಮಪತ್ರ ವಾಪಸ್‌ ಪಡೆಯುತ್ತಾರೆ ಎಂಬ ವಿಚಾರವೂ ಚರ್ಚೆಗೆ ಬಂದಿದೆ. ಈ ಬಗ್ಗೆ ತರೂರ್ ಅವರನ್ನು ಪ್ರಶ್ನಿಸಿದಾಗ, ‘ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾನು ನಾಮಪತ್ರ ವಾಪಸ್ ಪಡೆಯುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸೋನಿಯಾ ಅಧ್ಯಕ್ಷತೆಯ ವಿರುದ್ಧ ಪತ್ರ ಬರೆದಿದ್ದ ಜಿ–23 ಗುಂಪಿನ ಹಲವರು, ಖರ್ಗೆ ಅವರ ಉಮೇದುವಾರಿಕೆಯನ್ನು ಅನುಮೋದಿಸಿ ಸಹಿ ಮಾಡಿದ್ದಾರೆ. ನಾಮಪತ್ರ ಸಲ್ಲಿಸಲು ಖರ್ಗೆ ಅವರು ಪಕ್ಷದ ಕೇಂದ್ರ ಕಚೇರಿಗೆ ತೆರಳಿದಾಗ ಹಿರಿಯ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ, ದಿಗ್ವಿಜಯ ಸಿಂಗ್, ಪೃಥ್ವಿರಾಜ್ ಚವಾಣ್, ಎ.ಕೆ.ಆ್ಯಂಟನಿ, ಅಭಿಷೇಕ್ ಮನು ಸಿಂಘ್ವಿ, ಅಜಯ ಮಾಕನ್ ಇದ್ದರು. ಜಿ–23 ನಾಯಕರೂ ಖರ್ಗೆ ಅವರನ್ನು ಬೆಂಬಲಿಸಿರುವುದರಿಂದ, ಅವರೇ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಸ್ಪರ್ಧೆಯಿಂದ ದಿಗ್ವಿಜಯ ಸಿಂಗ್ ಹಿಂದೆ ಸರಿದಿರುವುದೂ ಇದನ್ನೇ ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

ಗೆಹಲೋತ್ ಅವರು ಸ್ಪರ್ಧೆಯಿಂದ ಹಿಂದೆ ಸರಿದ ನಂತರ, ದಿಗ್ವಿಜಯ ಸಿಂಗ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು. ಈ ಸಂಬಂಧ ಸೋನಿಯಾ ಗಾಂಧಿ ಅವರ ಜತೆಗೂ ಅವರು ಮಾತುಕತೆ ನಡೆಸಿದ್ದರು. ಗುರು
ವಾರ ಪಕ್ಷದ ಕಚೇರಿಗೆ ತೆರಳಿ ನಾಮಪತ್ರದ ಅರ್ಜಿಯನ್ನೂ ಪಡೆದುಕೊಂಡಿದ್ದರು.ಆದರೆ ಗುರುವಾರ ತಡರಾತ್ರಿ ಕ್ಷಿಪ್ರ ಬೆಳವಣಿಗೆ ನಡೆಯಿತು. ಖರ್ಗೆ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಚುನಾವಣಾ ಕಣಕ್ಕೆ ಇಳಿಯುವಂತೆ ಮನವೊಲಿಸಿದರು. ಆನಂತರ ಖರ್ಗೆ ಅವರುಶುಕ್ರವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸಿದ್ದಾರೆ.

ಈ ಬೆಳವಣಿಗೆಯ ಬೆನ್ನಲ್ಲೇ ದಿಗ್ವಿಜಯ ಸಿಂಗ್ ಅವರು ಖರ್ಗೆ ಅವರ ಜತೆಗೆ ಮಾತುಕತೆ ನಡೆಸಿದರು. ಆನಂತರ ಕಣದಿಂದ ಹಿಂದೆ ಸರಿಯುವ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.‘ನೀವು ಸ್ಪರ್ಧಿಸಿ ಎಂದು ಖರ್ಗೆ ಅವರನ್ನು ಈ ಮೊದಲು ಕೇಳಿಕೊಂಡಿದ್ದೆ. ಅವರು ನಿರಾಕರಿಸಿದ್ದರು. ಈಗ ಅವರು ನಾಮಪತ್ರ ಸಲ್ಲಿಸಿದ್ದಾರೆ. ಅವರು ನನಗಿಂತ ಹಿರಿಯರು. ಅವರ ವಿರುದ್ಧ ಕಣಕ್ಕೆ ಇಳಿಯುವುದನ್ನು ನಾನು ಯೋಚಿಸಲೂ ಸಾಧ್ಯವಿಲ್ಲ. ಅವರಿಗೆ ನನ್ನ ಬೆಂಬಲವಿದೆ. ನಾನು ಕಣದಿಂದ ಹಿಂದೆ ಸರಿದಿದ್ದೇನೆ’ ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.

‘ಬದಲಾವಣೆ ಬೇಕಿದ್ದರೆ ನನಗೆ ಮತ ನೀಡಿ’

‘ಕಾಂಗ್ರೆಸ್‌ನಲ್ಲಿ ಯಥಾಸ್ಥಿತಿ ಮುಂದುವರಿಯಬೇಕು ಎಂದಿದ್ದರೆ ಖರ್ಗೆ ಅವರಿಗೆ ಮತ ನೀಡಿ. ಪಕ್ಷದಲ್ಲಿ ಬದಲಾವಣೆಯಾಗಬೇಕು ಎಂದಿದ್ದರೆ ನನಗೆ ಮತ ನೀಡಿ’ ಎಂದು ಶಶಿ ತರೂರ್ ಹೇಳಿದ್ದಾರೆ.

ನಾಮಪತ್ರ ಸಲ್ಲಿಕೆಯ ನಂತರ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಇದು ಸ್ನೇಹಪೂರ್ವಕ ಸ್ಪರ್ಧೆ. ನಾವು ಎದುರಾಳಿಗಳೂ ಅಲ್ಲ ವೈರಿಗಳೂ ಅಲ್ಲ. ಅವರ ಬಗ್ಗೆ ನನಗೆ ಗೌರವವಿದೆ. ಆದರೆ, ನಾನು ನನ್ನ ಚಿಂತನೆಗಳನ್ನು ಪ್ರತಿನಿಧಿಸುತ್ತೇನೆ’ ಎಂದು ತರೂರ್ ಹೇಳಿದ್ದಾರೆ.

ತರೂರ್ ಎಡವಟ್ಟು: ನಾಮಪತ್ರ ಸಲ್ಲಿಕೆಯ ನಂತರ ತರೂರ್ ಅವರು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ಆದರೆ, ಅದರಲ್ಲಿ ಬಳಸಿದ್ದ ಭಾರತದ ಭೂಪಟದಲ್ಲಿ ಜಮ್ಮು–ಕಾಶ್ಮೀರ ಮತ್ತು ಲಡಾಖ್‌ನ ಪೂರ್ಣ ಭಾಗಗಳು ಇರಲಿಲ್ಲ. ಈ ಬಗ್ಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ತರೂರ್ ಅವರು ತಕ್ಷಣವೇ ಆ ಪ್ರಣಾಳಿಕೆಯನ್ನು ಹಿಂಪಡೆದರು ಮತ್ತು ಸರಿಪಡಿಸಲಾದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ರಾಹುಲ್ ಗಾಂಧಿ ಒಂದೆಡೆ ಭಾರತ ಜೋಡೊ ಯಾತ್ರೆ ನಡೆಸುತ್ತಿದ್ದಾರೆ. ಶಶಿ ತರೂರ್ ಅವರು ಜಮ್ಮು–ಕಾಶ್ಮೀರದ ಪ್ರಮುಖ ಭಾಗಗಳನ್ನೇ ಬಿಟ್ಟಿದ್ದಾರೆ. ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿದಂತೆ ಗಾಂಧಿಗಳದ್ದು ಇದೇ ನೀತಿ. ಅವರನ್ನು ಓಲೈಸಲು ತರೂರ್ ಹೀಗೆ ಮಾಡಿದ್ದಾರೆ ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ತರೂರ್, ಯಾರೂ ಉದ್ದೇಶಪೂರ್ವಕವಾಗಿ ಹೀಗೆ ಮಾಡುವುದಿಲ್ಲ. ಪ್ರಣಾಳಿಕೆ ಸಿದ್ಧಪಡಿಸುವಾಗ ಇಂತಹ ತಪ್ಪಾಗಿದೆ. ಅದು ಗೊತ್ತಾದ ತಕ್ಷಣವೇ ಸರಿಪಡಿಸಿದ್ದೇವೆ’ ಎಂದು ಹೇಳಿದ್ದಾರೆ.

ರಾಜ್ಯದ ಎರಡನೇ ವ್ಯಕ್ತಿ...

ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ನ ಅಧ್ಯಕ್ಷರಾಗಿ ಚುನಾಯಿತರಾದರೆ, ಆ ಹುದ್ದೆಗೆ ಏರಿದ ಕರ್ನಾಟಕದ ಎರಡನೇ ವ್ಯಕ್ತಿ ಎನಿಸುತ್ತಾರೆ. ಎಸ್‌.ನಿಜಲಿಂಗಪ್ಪ ಅವರು ಈ ಹಿಂದೆ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು.

ಅಲ್ಲದೆ, ದಲಿತ ನಾಯಕರಾಗಿದ್ದ ಜಗಜೀವನ್ ರಾಮ್ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. ಆನಂತರ ಆ ಹುದ್ದೆಗೆ ಏರಿದ ದಲಿತ ಸಮುದಾಯದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಖರ್ಗೆ ಪಾತ್ರರಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.