ADVERTISEMENT

ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಚುನಾವಣೆ: ಅ. 17ರಂದು ಮತದಾನ

ಚುನಾವಣಾ ಆಧಿಸೂಚನೆ ಪ್ರಕಟ: ಅವಿರೋಧ ಆಯ್ಕೆ ಆಗದಿದ್ದರೆ ಅ.19ರಂದು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 18:48 IST
Last Updated 22 ಸೆಪ್ಟೆಂಬರ್ 2022, 18:48 IST
ಮಹಾತ್ಮ ಗಾಂಧಿಯವರು 1925ರ ಮಾರ್ಚ್‌ 18ರಂದು ಯು.ಸಿ.ಕಾಲೇಜಿಗೆ ಭೇಟಿ ನೀಡಿದ್ದರು. ಆ ನೆನಪಿಗಾಗಿ ಕಾಲೇಜು ಆವರಣದಲ್ಲಿ ಮಾವಿನ ಸಸಿಯೊಂದನ್ನು ನೆಟ್ಟಿದ್ದರು. ಈ ಮರಕ್ಕೆ ಇಡಲಾಗಿದ್ದ ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ರಾಹುಲ್‌ ಗಾಂಧಿ ನಮನ ಸಲ್ಲಿಸಿದರು–ಪಿಟಿಐ ಚಿತ್ರ
ಮಹಾತ್ಮ ಗಾಂಧಿಯವರು 1925ರ ಮಾರ್ಚ್‌ 18ರಂದು ಯು.ಸಿ.ಕಾಲೇಜಿಗೆ ಭೇಟಿ ನೀಡಿದ್ದರು. ಆ ನೆನಪಿಗಾಗಿ ಕಾಲೇಜು ಆವರಣದಲ್ಲಿ ಮಾವಿನ ಸಸಿಯೊಂದನ್ನು ನೆಟ್ಟಿದ್ದರು. ಈ ಮರಕ್ಕೆ ಇಡಲಾಗಿದ್ದ ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ರಾಹುಲ್‌ ಗಾಂಧಿ ನಮನ ಸಲ್ಲಿಸಿದರು–ಪಿಟಿಐ ಚಿತ್ರ   

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಚುನಾವಣಾ ಅಧಿಸೂಚನೆಯನ್ನು ಕಾಂಗ್ರೆಸ್‌ ಪಕ್ಷವು ಗುರುವಾರ ಹೊರಡಿಸಿದೆ. ಕಾಂಗ್ರೆಸ್‌ ಪಕ್ಷದ ಅತ್ಯಂತ ದೀರ್ಘ ಕಾಲದ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಗಾಗಿ ಈ ಚುನಾವಣೆ ನಡೆಯಲಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಮತ್ತು ಸಂಸದ ಶಶಿ ತರೂರ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ.

ನಾಮಪತ್ರ ಸಲ್ಲಿಸಲು ಇದೇ 24ರಿಂದ 30ರವರೆಗೆ ಅವಕಾಶ ಇದೆ. ನಾಮಪತ್ರ ಪರಿಶೀಲನೆಯು ಅಕ್ಟೋಬರ್‌ 1ರಂದು ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಅಕ್ಟೋಬರ್ 8 ಕೊನೆಯ ದಿನ. ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್‌ 8ರಂದು ಸಂಜೆ 5 ಗಂಟೆಗೆ ಪ್ರಕಟಿಸಲಾಗುವುದು. ಮತದಾನದ ಅಗತ್ಯ ಬಿದ್ದರೆ ಅಕ್ಟೋಬರ್‌ 17ರಂದು ಮತದಾನ ನಡೆಯಲಿದೆ. ಅಕ್ಟೋಬರ್‌ 19ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಪ್ರದೇಶ ಕಾಂಗ್ರೆಸ್ ಸಮಿತಿಯ 9,000ಕ್ಕೂ ಹೆಚ್ಚು ಪ್ರತಿನಿಧಿಗಳಿಗೆ ಮತದಾನದ ಹಕ್ಕು ಇದೆ. ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಈ ‍ಪ್ರತಿನಿಧಿಗಳ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ. ಇದೇ 20ರಂದು ಪರಿಶೀಲನೆಗೆ ಅವಕಾಶ ಕೊಡಲಾಗುವುದು. ದೆಹಲಿಯ 24, ಅಕ್ಬರ್‌ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಾಮಪತ್ರ ಲಭ್ಯವಿದೆ ಎಂದು ಕಾಂಗ್ರೆಸ್ ಚುನಾವಣಾ ಸಮಿತಿ ಅಧ್ಯಕ್ಷ ಮಧುಸೂದನ ಮಿಸ್ತ್ರಿ ಹೇಳಿದ್ದಾರೆ.

ADVERTISEMENT

ಅಶೋಕ್‌ ಗೆಹಲೋತ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಬುಧವಾರ ವ್ಯಕ್ತಪಡಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಹೇಗೆ ಎಂಬುದನ್ನು ತಿಳಿಯುವುದಕ್ಕಾಗಿ
ಶಶಿ ತರೂರ್‌ ಅವರು ಸೋನಿಯಾ ಗಾಂಧಿಯನ್ನು ಭೇಟಿಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಅಧ್ಯಕ್ಷ
ಸ್ಥಾನದ ಚುನಾವಣೆಯು ಗಮನ ಸೆಳೆದಿದೆ. ಎರಡು ದಶಕಗಳ ಬಳಿಕ ಈ ಹುದ್ದೆಗೆ ಚುನಾವಣೆ ನಡೆಯಲಿದೆ. 1998ರಲ್ಲಿ ಸೋನಿಯಾ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆ ವಹಿಸಿಕೊಂಡಿದ್ದರು. 2017–2019ರ ಅವಧಿಯಲ್ಲಿ ರಾಹುಲ್‌ ಪಕ್ಷದ ಅಧ್ಯಕ್ಷರಾಗಿದ್ದರು.

2000ನೇ ಇಸವಿಯಲ್ಲಿ ನಡೆದ ಚುನಾವಣೆಯಲ್ಲಿ ಜಿತೇಂದ್ರ ಪ್ರಸಾದ ಅವರನ್ನು ಸೋಲಿಸಿ ಸೋನಿಯಾ ಅವರು ಅಧ್ಯಕ್ಷರಾಗಿದ್ದರು. ಅದಕ್ಕೂ ಹಿಂದೆ 1997ರಲ್ಲಿ ನಡೆದ ಚುನಾವಣೆಯಲ್ಲಿ ಸೀತಾರಾಂ ಕೇಸರಿ ಗೆದ್ದಿದ್ದರು. ಶರದ್‌ ಪವಾರ್‌ ಮತ್ತು ರಾಜೇಶ್‌ ಪೈಲಟ್‌ ಸೋತಿದ್ದರು.

ಈ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿ ಎಂದು ಯಾರೂ ಇರುವುದಿಲ್ಲ. ತಾವು ತಟಸ್ಥವಾಗಿಯೇ ಇರುವುದಾಗಿ ಸೋನಿಯಾ ಗಾಂಧಿ ಹೇಳಿದ್ದಾರೆ.

ಒಬ್ಬರಿಗೆ ಒಂದೇ ಹುದ್ದೆ: ರಾಹುಲ್

ಕೊಚ್ಚಿ: ‘ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ’ ನೀತಿಯ ಪರವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ. ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಅದರಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹಾಗೂ ಸಂಸದ ಶಶಿ ತರೂರ್ ಅವರು ಸ್ಪರ್ಧೆಯ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಸಮಯದಲ್ಲಿ ರಾಹುಲ್ ಈ ಹೇಳಿಕೆ ನೀಡಿದ್ದಾರೆ.

‘ಉದಯಪುರದಲ್ಲಿ ನಡೆದಿದ್ದ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ತೆಗೆದುಕೊಳ್ಳಲಾಗಿದ್ದ ಒಬ್ಬರಿಗೆ ಒಂದು ಹುದ್ದೆ ಎಂಬ ನಿಲುವಿಗೆ ಪಕ್ಷ ಬದ್ಧವಾಗಿದೆ. ಈ ಬಗ್ಗೆ ಬದ್ಧತೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ’ ಎಂದು ರಾಹುಲ್ ಹೇಳಿದ್ದಾರೆ. ಗೆಹಲೋತ್ ಅವರು ಪಕ್ಷದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದರೆ, ಅದರ ಜೊತೆಗೆ ರಾಜಸ್ಥಾನ ಮುಖ್ಯಮಂತ್ರಿ ಹುದ್ದೆಯನ್ನೂ ಉಳಿಸಿಕೊಳ್ಳುವ ಇರಾದೆಯಲ್ಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಾಹುಲ್ ಅವರ ಈ ಮಾತು ಮಹತ್ವ ಪಡೆದಿದೆ.

‘ಪಕ್ಷದ ಅಧ್ಯಕ್ಷ ಹುದ್ದೆ ಕೇವಲ ಸಂಘಟನಾತ್ಮಕ ಹುದ್ದೆಯಲ್ಲ, ಅದು ಸೈದ್ಧಾಂತಿಕ ಸ್ಥಾನವೂ ಆಗಿರುತ್ತದೆ. ಯಾರೇ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಲಿ, ಒಂದಷ್ಟು ಚಿಂತನೆಗಳು, ನಂಬಿಕೆ ಹಾಗೂ ಭಾರತದ ಬಗೆಗಿನ ದೃಷ್ಟಿಕೋನವನ್ನು ತಾವು ಪ್ರತಿನಿಧಿಸುತ್ತಿದ್ದೇವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.