ನವದೆಹಲಿ: ರಸ್ತೆ ಅಭಿವೃದ್ಧಿ ಯೋಜನೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಹಾಲೇಖಪಾಲರು ನೀಡಿರುವ ವರದಿಯನ್ನು ಕೇಂದ್ರ ಸರ್ಕಾರದ ವಿರುದ್ಧ ಅಸ್ತ್ರವನ್ನಾಗಿ ಕಾಂಗ್ರೆಸ್ ಪಕ್ಷ ಬಳಸಿಕೊಂಡಿದೆ.
‘ಬಿಜೆಪಿಯವರು ದೇಶದ ಹೆದ್ದಾರಿಗಳನ್ನು ನರಕವಾಗಿಸಿದ್ದಾರೆ. ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ವಿರುದ್ಧ ಪ್ರಧಾನಿ ಮೋದಿ ಕ್ರಮಕೈಗೊಳ್ಳುವರೇ’ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
‘ಭಾರತಮಾಲಾ ಯೋಜನೆ’ಗಳು, ಟೋಲ್ ಸಂಗ್ರಹ ಮತ್ತು ‘ಆಯುಷ್ಮಾನ್ ಭಾರತ್’ ಯೋಜನೆಗಳಿಗೆ ಸಂಬಂಧಿಸಿದ ಲೆಕ್ಕ ಪರಿಶೋಧನೆಯ ಮಹಾಲೇಖಪಾಲರ ವರದಿಯನ್ನು ಸಂಸತ್ತಿನಲ್ಲಿ ಇತ್ತೀಚೆಗೆ ಮಂಡಿಸಲಾಗಿದ್ದು, ಹಲವು ಅಕ್ರಮಗಳು ಬಯಲಾಗಿವೆ.
ಬಿಜೆಪಿಯ ಭ್ರಷ್ಟಾಚಾರ ಮತ್ತು ಲೂಟಿಯಿಂದಾಗಿ ಭಾರತದ ಹೆದ್ದಾರಿಗಳು ನರಕವಾಗಿವೆ. ಅಸಂಖ್ಯ ನ್ಯೂನತೆಗಳು, ಟೆಂಡರ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಅಕ್ರಮ, ಅನುದಾನದ ಅಸಮರ್ಪಕ ನಿರ್ವಹಣೆಯಂಥ ದೊಡ್ಡ ಅಕ್ರಮಗಳತ್ತ ಮಹಾಲೇಖಪಾಲರ ವರದಿ ಬೊಟ್ಟು ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ದ್ವಾರಕಾ ಎಕ್ಸ್‌ಪ್ರೆಸ್‌ವೇನ ಅಭಿವೃದ್ಧಿ ವೆಚ್ಚದಲ್ಲಿ ಶೇ 1,278ರಷ್ಟು ಹೆಚ್ಚಳವಾಗಿದೆ. ಆರಂಭದಲ್ಲಿ ₹528.8 ಕೋಟಿ ಇದ್ದ ಯೋಜನೆಯ ವೆಚ್ಚ ಅಂತಿಮವಾಗಿ ₹7,287.2 ಕೋಟಿಗೆ ಏರಿದೆ ಎಂಬ ಸಿಎಜಿ ಅಂಕಿ ಅಂಶಗಳನ್ನು ಉಲ್ಲೇಖಿಸಿ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
‘ಆರಂಭದಲ್ಲಿ ಒಂದು ಕಿ.ಮೀಗೆ ₹18 ಕೋಟಿ ನಿಗದಿಯಾಗಿದ್ದ ದ್ವಾರಕಾ ಎಕ್ಸ್‌ಪ್ರೆಸ್‌ವೇನ ನಿರ್ಮಾಣ ವೆಚ್ಚ, ₹250 ಕೋಟಿಗೆ ಏರಿ 14 ಪಟ್ಟು ಹೆಚ್ಚಾಗಿದೆ. ಜೊತೆಗೆ ₹3,598.52 ಕೋಟಿಯನ್ನು ಅಕ್ರಮವಾಗಿ ಬೇರೆಡೆಗೆ ತಿರುಗಿಸಲಾಗಿದೆ. ತಮ್ಮ ನಿಗಾದಲ್ಲಿರುವ ‘ಭಾರತಮಾಲಾ ಯೋಜನೆ’ಯಲ್ಲಿನ ಈ ಅಕ್ರಮದ ಹೊಣೆಯನ್ನು ಪ್ರಧಾನಿ ಹೊರುವರೇ? ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನೆ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ರಾಧಿಕಾರವು ಅಕ್ರಮವಾಗಿ ಟೋಲ್ ಸಂಗ್ರಹಿಸಿದೆ. ಆಯ್ದ ಐದು ಟೋಲ್ ಪ್ಲಾಜಾಗಳು ಅಕ್ರಮವಾಗಿ 132.5 ಕೋಟಿ ಟೋಲ್ ಸಂಗ್ರಹಿಸಿರುವುದು ಲೆಕ್ಕ ಪರಿಶೋಧನೆಯಲ್ಲಿ ಬಯಲಾಗಿದೆ. ಒಪ್ಪಂದಗಳಲ್ಲಿನ ನ್ಯೂನತೆಯಿಂದಾಗಿ ಹೆದ್ದಾರಿ ಪ್ರಾಧಿಕಾರಕ್ಕೆ 133.6 ಕೋಟಿ ನಷ್ಟವಾಗಿರುವುದನ್ನೂ ಕಾಂಗ್ರೆಸ್ ನಾಯಕ ಖರ್ಗೆ ಬೊಟ್ಟು ಮಾಡಿ ತೋರಿಸಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿರುವುದು, ನಕಲಿ ಫಲಾನುಭವಿಗಳು ಯೋಜನೆಯ ಲಾಭ ಪಡೆದಿರುವುದನ್ನೂ ಕಾಂಗ್ರೆಸ್ ತನ್ನ ಟೀಕೆಗೆ ಬಳಸಿಕೊಂಡಿದೆ.
ಅಯೋಧ್ಯ ಅಭಿವೃದ್ಧಿ ಯೋಜನೆಯ ಹಣ, ವೃದ್ಧಾಪ್ಯ ವೇತನದ ಹಣವನ್ನು ಪ್ರಧಾನಿ ಮೋದಿ ಸರ್ಕಾರದ ಪ್ರಚಾರಕ್ಕೆ ಬಳಸಿರುವ ಬಗ್ಗೆಯೂ ಸಿಎಜಿ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.