ನವದೆಹಲಿ: ಅಧ್ಯಕ್ಷ ಸ್ಥಾನದ ಚುನಾವಣೆ ಕುರಿತಂತೆ ಇದ್ದ ಊಹಾಪೋಹಗಳಿಗೆ ಕಾಂಗ್ರೆಸ್ ಪಕ್ಷವು ತೆರೆ ಎಳೆದಿದೆ. ಪಕ್ಷವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಕ್ಟೋಬರ್ 17ರಂದು ಮತದಾನ ನಡೆಯಲಿದೆ. ಎರಡು ದಿನಗಳ ಬಳಿಕ ಅಂದರೆ, ಅ. 19ರಂದು ಮತ ಎಣಿಕೆ ಮಾಡಲಾಗುವುದು ಎಂದು ಪಕ್ಷವು ಹೇಳಿದೆ. ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸುತ್ತಿರುವ ಏಕೈಕ ಪಕ್ಷ ತಾನು ಎಂದೂ ಕಾಂಗ್ರೆಸ್ ಹೇಳಿ ಕೊಂಡಿದೆ.
ಈ ಹಿಂದೆ, 2000ನೇ ಇಸವಿಯ ನವೆಂಬರ್‌ನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ನೆಹರೂ–ಗಾಂಧಿ ಕುಟುಂಬದ ಬಿಗಿ ಹಿಡಿತದ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ವನ್ನು ವಂಶಾಡಳಿತದ ಪಕ್ಷ ಎಂದು ಬಿಜೆಪಿ ಸದಾ ಟೀಕಿಸುತ್ತಲೇ ಇದೆ. ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಅತಿ ದೀರ್ಘ ಕಾಲ ಇದ್ದವರು ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. 1998ರಲ್ಲಿ ಈ ಸ್ಥಾನಕ್ಕೆ ಏರಿದರು. 2017–19ರ ಅವಧಿಯಲ್ಲಿ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. 2019ರಲ್ಲಿ ರಾಹುಲ್ ರಾಜೀನಾಮೆ ನೀಡಿದ ಬಳಿಕ ಸೋನಿಯಾ ಅವರೇ ಮತ್ತೆ ಈ ಸ್ಥಾನಕ್ಕೆ ಬಂದರು.
ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಭಾನುವಾರ ನಡೆಯಿತು. ಚುನಾ ವಣಾ ವೇಳಾಪಟ್ಟಿಗೆ ಸಭೆಯಲ್ಲಿ ಸರ್ವಾ ನುಮತದ ಒಪ್ಪಿಗೆ ದೊರೆಯಿತು ಎಂದು ಪಕ್ಷದ ಚುನಾವಣಾ ಸಮಿತಿ ಅಧ್ಯಕ್ಷ ಮಧುಸೂದನ ಮಿಸ್ತ್ರಿ ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಚಿಕಿತ್ಸೆಗಾಗಿ ವಿದೇಶ ದಲ್ಲಿದ್ದಾರೆ. ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಜತೆಗಿದ್ದಾರೆ. ಹಾಗಾಗಿ, ಈ ಮೂವರು ಆನ್‌ಲೈನ್ ಮೂಲಕ ಸಭೆ ಯಲ್ಲಿ ಭಾಗಿಯಾದರು. ಸೋನಿಯಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಪಕ್ಷದ ಚುನಾವಣಾ ಸಮಿತಿಯು ಸೆ. 22ರಂದು ಚುನಾವಣೆಯ ಅಧಿ ಸೂಚನೆ ಹೊರಡಿಸಲಿದೆ. ಸೆ. 24ರಿಂದ ಸೆ. 30ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.