ADVERTISEMENT

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್‌ ಸ್ಪರ್ಧೆ: ಕೇರಳ ನಾಯಕರಿಂದ ಅಸಮಾಧಾನ

ಪಿಟಿಐ
Published 20 ಸೆಪ್ಟೆಂಬರ್ 2022, 9:54 IST
Last Updated 20 ಸೆಪ್ಟೆಂಬರ್ 2022, 9:54 IST
ಸಂಸದ ಶಶಿ ತರೂರ್‌
ಸಂಸದ ಶಶಿ ತರೂರ್‌   

ಅಲಪ್ಪುಳ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಶಶಿ ತರೂರ್‌ ಅವರು ಸ್ಪರ್ಧಿಸಿರುವುದಕ್ಕೆ ಕೇರಳ ಪ್ರದೇಶ ಕಾಂಗ್ರೆಸ್‌ನ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ತರೂರ್‌ ಅವರ ಸಹವರ್ತಿಗಳಾದ ಕೊಡಿಕುನ್ನಿಲ್‌ ಸುರೇಶ್‌ ಮತ್ತು ಕೆ. ಮುರಳೀಧರನ್‌ ಪರೋಕ್ಷವಾಗಿ ಅಸಮಾಧಾನ ತೋರಿದ್ದಾರೆ. ರಾಹುಲ್‌ ಗಾಂಧಿ ಅವರೇ ಅಧ್ಯಕ್ಷ ಗಾದಿಗೆ ಏರಬೇಕು ಎಂದು ಇಬ್ಬರೂ ಸಂಸದರು ಅಪೇಕ್ಷಿಸಿದ್ದಾರೆ.

'ಒಂದು ವೇಳೆ ರಾಹುಲ್‌ ಗಾಂಧಿ ಅವರು ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದರಷ್ಟೇ ಆ ಸ್ಥಾನಕ್ಕೆ ಚುನಾವಣೆ ನಡೆಸಬೇಕು. ಆಗ ಮಾತ್ರ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಎಐಸಿಸಿಯ ಉನ್ನತ ಸ್ಥಾನಕ್ಕೆ ಸ್ಪರ್ಧಿಸಬಹುದು. ಇದು ಕೇರಳ ಪ್ರದೇಶ ಕಾಂಗ್ರೆಸ್‌ ಸಮೀತಿ ಮತ್ತು ನಮ್ಮೆಲ್ಲರ ಅಭಿಪ್ರಾಯವಾಗಿದೆ' ಎಂದು ಮಾಜಿ ಕೇಂದ್ರ ಸಚಿವ ಸುರೇಶ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ಎಐಸಿಸಿಯ ಅಧ್ಯಕ್ಷ ಸ್ಥಾನಕ್ಕೆ ತರೂರ್‌ ಅವರು ಸ್ಪರ್ಧಿಸುತ್ತಿರುವುದು ಅವರ ವೈಯಕ್ತಿಕ ನಿರ್ಧಾರವಾಗಿದೆ. ಈ ಕುರಿತು ತರೂರ್‌ ಅವರು ಪಕ್ಷದ ನಾಯಕರ ಜೊತೆ ಸಮಾಲೋಚಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಹಾಗಾಗಿ ತರೂರ್‌ ಅವರ ಸ್ಪರ್ಧೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಏಳು ಬಾರಿ ಸಂಸದರಾಗಿರುವ ಸುರೇಶ್‌ ಹೇಳಿದ್ದಾರೆ.

ನೆಹರೂ ಕುಟುಂಬಕ್ಕೆ ಪ್ರಾಮುಖ್ಯತೆ ನೀಡುವ ಅಭ್ಯರ್ಥಿ ಪರ ಮತ ಚಲಾಯಿಸುವುದಾಗಿ ಮುರಳೀಧರನ್‌ ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರು ಅಧ್ಯಕ್ಷ ಹುದ್ದೆಗೆ ಏರುವುದರ ಬಗ್ಗೆ ಪಕ್ಷದಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ ರಾಹುಲ್‌ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸುತ್ತಾರೆಯೋ, ಇಲ್ಲವೋ ಎಂಬುದರ ಮೇಲೆ ಚುನಾವಣೆ ಅವಲಂಬಿತವಾಗಿದೆ ಎಂದರು.

ಶಶಿ ತರೂರ್‌ ಅವರ ಸ್ಪರ್ಧೆಗೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೋಮವಾರ ಹಸಿರು ನಿಶಾನೆ ತೋರಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ಸಹ ಆಕಾಂಕ್ಷಿಯಾಗಿದ್ದು, ಚುನಾವಣಾ ಕಣ ರಂಗೇರುವ ನಿರೀಕ್ಷೆ ಇದೆ.

ಶಶಿ ತರೂರ್‌ ಸೋಮವಾರ ಸೋನಿಯಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದಾಗ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅನುಮತಿ ನೀಡಿದರು. ಗಾಂಧಿ ಕುಟುಂಬದ ಬೆಂಬಲಿತ ಅಭ್ಯರ್ಥಿ ತಮ್ಮ ಎದುರು ಕಣಕ್ಕಿಳಿದರೂ ತರೂರ್‌ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಮೂಲಗಳು ಖಚಿತಪಡಿಸಿವೆ. ‘ರಾಹುಲ್‌ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೆ ಸ್ಪರ್ಧೆಯಿಂದ ಹಿಂದೆ ಸರಿಯುವೆ’ ಎಂದು ತರೂರ್‌ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.