ADVERTISEMENT

ಖರ್ಗೆ ಕಾಂಗ್ರೆಸ್‌ನ 'ಭೀಷ್ಮ ಪಿತಾಮಹ'; ನಾಮಪತ್ರ ಹಿಂಪಡೆಯಲ್ಲ: ಶಶಿ ತರೂರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2022, 9:54 IST
Last Updated 30 ಸೆಪ್ಟೆಂಬರ್ 2022, 9:54 IST
ಶಶಿ ಶರೂರ್
ಶಶಿ ಶರೂರ್   

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ತಿರುವನಂತಪುರದ ಸಂಸದ ಶಶಿ ತರೂರ್, ತಮ್ಮ ನಿರ್ಧಾರ ಬದಲಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶಶಿ ತರೂರ್ ಸ್ವಾಗತಿಸಿದ್ದಾರೆ. ಅಲ್ಲದೆ ಖರ್ಗೆ ಅವರನ್ನು ಕಾಂಗ್ರೆಸ್ ಪಕ್ಷದ 'ಭೀಷ್ಮ ಪಿತಾಮಹ' ಎಂದು ಬಣ್ಣಿಸಿದ್ದಾರೆ.

ಜೊತೆಗೆ ಖರ್ಗೆ ಅವರಿಗೆ ದೊರಕಿರುವ ಬೆಂಬಲದಿಂದ ಅಚ್ಚರಿಗೊಂಡಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ನಾನು ನಾಮಪತ್ರ ಹಿಂಪಡೆಯುವುದಿಲ್ಲ. ಏಕೆಂದರೆ ದೇಶದಾದ್ಯಂತ ನನ್ನನ್ನು ಬೆಂಬಲಿಸಿದ ಕಾರ್ಯಕರ್ತರನ್ನು ನಿರಾಶೆಗೊಳಿಸಲು ಬಯಸುವುದಿಲ್ಲ ಎಂದು ಹೇಳಿದರು.

ನಮ್ಮಿಬ್ಬರ ಮಧ್ಯೆ ಸೌಹಾರ್ದ ಸ್ಪರ್ಧೆ ಏರ್ಪಡಲಿದೆ. ಇಲ್ಲಿ ಯಾರೇ ಶತ್ರುಗಳು ಅಥವಾ ಪ್ರತಿಸ್ಪರ್ಧಿಗಳಿಲ್ಲ. ಖರ್ಗೆ ಅವರಿಗೆ ಅಗೌರವವನ್ನು ತೋರುವುದಿಲ್ಲ. ಆದರೆ ನಾನು ನನ್ನ ಆಲೋಚನೆಗಳನ್ನು ಮುಂದಿಡಲು ಬಯಸುತ್ತೇನೆ ಎಂದು ತರೂರ್ ಹೇಳಿದರು.

ನಾನು ಕಾಂಗ್ರೆಸ್ ಪಕ್ಷದ ಬಗ್ಗೆ ದೂರದೃಷ್ಟಿಯನ್ನು ಹೊಂದಿದ್ದೇನೆ.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನನಗೆ ದೇಶದಾದ್ಯಂತ ಕಾರ್ಯಕರ್ತರಿಂದ ಬೆಂಬಲ ದೊರಕಿದೆ. ನಾವೆಲ್ಲರೂ ಸೇರಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ದೇಶವನ್ನು ಮುನ್ನಡೆಸಬೇಕಿದೆ ಎಂದು ಹೇಳಿದರು.

ಪಕ್ಷದ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತಲು ಬಯಸುತ್ತೇನೆ. ಪಕ್ಷದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಬಯಸುವವರು ನನಗೆ ಮತ ಹಾಕಲು ಒಲವು ತೋರುವುದಿಲ್ಲ. ಏಕೆಂದರೆ ನಾನು ಪಕ್ಷದಲ್ಲಿ ಬದಲಾವಣೆಯನ್ನು ಪ್ರತಿನಿಧಿಸುತ್ತೇನೆ. ಕಳೆದ ಕೆಲವು ವರ್ಷಗಳಿಂದ ಪಕ್ಷ ಹಿನ್ನಡೆ ಅನುಭವಿಸುತ್ತಿದ್ದು, ಹಾಗಾಗಿ ವಿಭಿನ್ನ ರೀತಿಯಲ್ಲಿ ಪಕ್ಷವನ್ನು ಮುನ್ನಡೆಸುವ ಗುರಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.