ವಯನಾಡು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದಗುರುವಾರ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.
ಸೋದರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಕೇರಳದ ವಯನಾಡಿಗೆ ರಾಹುಲ್ ಗಾಂಧಿ ಅವರು ಹೆಲಿಕಾಪ್ಟರ್ ಮೂಲಕ ಬಂದಿಳಿದರು. ಬಿಳಿ ಶರ್ಟ್ ಮತ್ತು ಪಂಚೆ ಉಟ್ಟಿದ್ದ ರಾಹುಲ್ ಗಾಂಧಿ ಅಪ್ಪಟ ಕೇರಳ ರಾಜಕಾರಣಿಯಂತೆ ಕಂಡರು.
ನಂತರ ರೋಡ್ ಶೋ ಮೂಲಕ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಕಲ್ಪೆಟ್ಟ ಎಂಬಲ್ಲಿರುವವಯನಾಡು ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತೆರಳಿದ ಅವರು ನಾಮಪತ್ರ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ಆಪ್ತರೂ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಕೆ.ಸಿ ವೇಣುಗೋಪಾಲ್ ಇದ್ದರು.
Kerala: Congress President Rahul Gandhi files nomination from Wayanad parliamentary constituency. #LokSabhaElections2019 pic.twitter.com/abn2g9ahQE
ಗಾಂಧಿ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರವಾಗಿರುವ ಅಮೇಠಿಯ ಜತೆಗೇ ಎರಡನೇ ಕ್ಷೇತ್ರ ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಕಳೆದ ವಾರವಷ್ಟೇ ಕಾಂಗ್ರೆಸ್ ಘೋಷಣೆ ಮಾಡಿತ್ತು. ಅಮೇಠಿಯಿಂದ ರಾಹುಲ್ ಗಾಂಧಿ ಅವರು 2004ರಿಂದಲೂ ಗೆಲ್ಲುತ್ತಾ ಬಂದಿದ್ದಾರೆ.
ರಾಹುಲ್ ಗಾಂಧಿ ಅವರ ವಿರುದ್ಧ ವಯನಾಡಿನಲ್ಲಿ ಬಿಜೆಪಿಯು ಬಿಡಿಜೆಎಸ್‌ನ ( ಭಾರತ್ ಧರ್ಮ ಜನ ಸೇನಾ) ತುಷಾರ್ ವೇಳಾಪಳ್ಳಿ ಅವರನ್ನು ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ಹೀಗಿರುವಾಗಲೇ ಗುರುವಾರ ಅತ್ತ ಅಮೇಠಿಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿರುವ ಸ್ಮೃತಿ ಇರಾನಿ ರಾಹುಲ್ ಗಾಂಧಿ ಅವರನ್ನು ಟೀಕೆ ಮಾಡಿದ್ದಾರೆ. ‘ಅಮೇಠಿಯೊಂದಿಗೆ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಮೂಲಕ ರಾಹುಲ್ ಗಾಂಧಿ ಇಲ್ಲಿನ ಮತದಾರರನ್ನು ಅವಮಾನಿಸಿದ್ದಾರೆ. ಹದಿನೈದು ವರ್ಷಗಳಿಂದ ಅಮೇಠಿಯಲ್ಲಿ ಗೆದ್ದು ಅಧಿಕಾರ ಅನುಭವಿಸಿರುವ ರಾಹುಲ್, ಈಗ ಏಕಾಏಕಿ ಕೇರಳಕ್ಕೆ ವಲಸೆ ಹೋಗಿದ್ದಾರೆ. ಇಲ್ಲಿನ ಜನ ಅವರ ಮೋಸವನ್ನು ಮರೆಯುವುದಿಲ್ಲ,’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.