ADVERTISEMENT

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಎರಡೂವರೆ ಗಂಟೆ ಇ.ಡಿ ವಿಚಾರಣೆ ಎದುರಿಸಿದ ಸೋನಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2022, 11:37 IST
Last Updated 26 ಜುಲೈ 2022, 11:37 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಜರಾಗಿದ್ದಾರೆ.

ಸೋನಿಯಾ ಗಾಂಧಿ ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೇಂದ್ರ ದೆಹಲಿಯ ಕೇಂದ್ರ ಭಾಗದಲ್ಲಿ ಇ.ಡಿ ಕಚೇರಿಗೆ ತೆರಳಿದ್ದರು. ಸುಮಾರು ಎರಡೂವರೆ ಗಂಟೆಗಳ ಕಾಲ ಇ.ಡಿ ವಿಚಾರಣೆ ಎದುರಿಸಿದ್ದು, ಸೋನಿಯಾ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನದ ಭೋಜನ ನಿಮಿತ್ತ ಸೋನಿಯಾ ಮಧ್ಯಾಹ್ನ 2 ಗಂಟೆ ಸುಮಾರಿಗೆ ಇ.ಡಿ ಕಛೇರಿಯಿಂದ ಹೊರಟಿದ್ದರು.

ADVERTISEMENT

ಸೋನಿಯಾ ಅವರು Z+ ಭದ್ರತೆಯಲ್ಲಿ ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಬೆಳಿಗ್ಗೆ 11 ಗಂಟೆಗೆ ಇ.ಡಿ ಕಚೇರಿಗೆ ತಲುಪಿದ್ದರು.

ಪ್ರಿಯಾಂಕಾ ಗಾಂಧಿ ಇ.ಡಿ ಕಚೇರಿಯಲ್ಲಿಯೇ ಉಳಿದುಕೊಂಡಿದ್ದಾರೆ. ರಾಹುಲ್ ಗಾಂಧಿ ಶೀಘ್ರವೇ ಅಲ್ಲಿಂದ ತೆರಳಿದ್ದು, ಸೋನಿಯಾ ಗಾಂಧಿ ವಿಚಾರಣೆ ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸದ್ಯ ಪೊಲೀಸರು ರಾಹುಲ್ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರು ಇಡಿ ಕಚೇರಿಯಲ್ಲೇ ಉಳಿದಿದ್ದು, ಸೋನಿಯಾ ಅವರನ್ನು ಭೇಟಿಯಾಗಿ ಔಷಧಗಳು ಅಥವಾ ಅಗತ್ಯವಿದ್ದಲ್ಲಿ ವೈದ್ಯಕೀಯ ನೆರವು ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 11 ರಂದು ನಡೆದ ಎರಡು ಗಂಟೆಗಳ ಮೊದಲ ಸುತ್ತಿನ ವಿಚಾರಣೆ ವೇಳೆ ಇ.ಡಿ ಅಧಿಕಾರಿಗಳು 28 ಪ್ರಶ್ನೆಗಳನ್ನು ಸೋನಿಯಾ ಮುಂದಿಟ್ಟಿದ್ದರು ಎಂದು ತಿಳಿದು ಬಂದಿದೆ.

ನ್ಯಾಷನಲ್ ಹೆರಾಲ್ಡ್ ಒಡೆತನ ಹೊಂದಿರುವ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನ ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿದು ಬಂದಿದೆ.

ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಪ್ರತಿಭಟನೆ ಮುಂದುವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇ.ಡಿ ಕಚೇರಿಯಿಂದ ಸೋನಿಯಾ ಗಾಂಧಿಯವರ ನಿವಾಸದವರೆಗೂ ಸಿಆರ್‌ಪಿಎಫ್ ಮತ್ತು ಆರ್‌ಎಎಫ್ ಪಡೆಗಳನ್ನು ನಿಯೋಜಿಸಲಾಗಿದ್ದು, ಈ ಪ್ರದೇಶದಲ್ಲಿ ಸಂಚಾರ ನಿಷೇಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.