ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಈ ಮಧ್ಯೆ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ.
ಉತ್ತರ ಪ್ರದೇಶದ ಚುನಾವಣೆಯಲ್ಲಿ ಗಂಭೀರವಾದ ಅಕ್ರಮ ನಡೆದಿದೆ ಎಂದು ಶಶಿ ತರೂರ್ ಅವರ ಎಲೆಕ್ಷನ್ ಏಜೆಂಟ್, ಕಾಂಗ್ರೆಸ್‌ನ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಹಾಕಲಾಗಿರುವ ಎಲ್ಲ ಮತಗಳನ್ನು ಅಮಾನ್ಯವೆಂದು ಪರಿಗಣಿಸುವಂತೆ ಅವರು ಒತ್ತಾಯಿಸಿದ್ದಾರೆ ಎಂದು ಎಎನ್‌ಐ ಟ್ವೀಟಿಸಿದೆ.
ಇದಕ್ಕೂ ಮುನ್ನ, ಪಂಜಾಬ್ ಮತ್ತು ತೆಲಂಗಾಣದ ಚುನಾವಣೆಯಲ್ಲೂ ಅಕ್ರಮ ನಡೆದಿದೆ ಎಂದು ತರೂರ್ ಬಣ ಆರೋಪಿಸಿತ್ತು.
ಎರಡು ದಶಕಗಳಿಗೂ ಅಧಿಕ ಸಮಯದ ನಂತರ ಪಕ್ಷದ ಉನ್ನತ ಹುದ್ದೆಗೆ ನೆಹರೂ–ಗಾಂಧಿ ಕುಟುಂಬದವರಲ್ಲದ ವ್ಯಕ್ತಿಯೊಬ್ಬರ ಆಯ್ಕೆಗೆ ವೇದಿಕೆ ಸಜ್ಜಾಗಿದೆ.
ಆದರೆ, ಮತ ಎಣಿಕೆಗೂ ಮುನ್ನ ಎಲ್ಲ ರಾಜ್ಯಗಳ ಮತ ಪತ್ರಗಳನ್ನು ಒಂದೆಡೆ ಸುರಿದು ಮಿಶ್ರಣ ಮಾಡಲಾಗಿದೆ. ಇಂದು ದಿನದ ಅಂತ್ಯದ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
1998ರಿಂದ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷೆಯಾಗಿದ್ದರು. ಕೆಲ ಸಮಯ ರಾಹುಲ್ ಗಾಂಧಿಯವರು ಪಕ್ಷದ ಅಧ್ಯಕ್ಷರಾಗಿದ್ದರು. 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸೋಲುಂಡ ಬಳಿಕ ಅಧ್ಯಕ್ಷ ಸ್ಥಾನ ತ್ಯಜಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.