ಹೈದರಾಬಾದ್: ಪುನರ್ ರಚನೆಗೊಂಡ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಮೊದಲ ಸಭೆ ಇಂದು (ಶನಿವಾರ) ನಡೆಯಲಿದೆ. ಐದು ರಾಜ್ಯಗಳ ಮುಂಬರುವ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸುವ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಈ ಸಭೆ ನಡೆಯಲಿದ್ದು, ಆ ಮೂಲಕ ಆಡಳಿತರೂಢ ಬಿಆರ್‌ಎಸ್ ಪಕ್ಷಕ್ಕೆ ಕಾಂಗ್ರೆಸ್ ಪರೋಕ್ಷ ಸಂದೇಶ ರವಾನೆ ಮಾಡಿದೆ.
ತೆಲಂಗಾಣ ರಾಜಕೀಯದಲ್ಲಿ ಪಕ್ಷಕ್ಕೆ ಈ ಸಭೆಯು ‘ಗೇಮ್ ಚೇಂಜರ್’ ಹಾಗೂ ‘ಪರಿವರ್ತನೆಯ ಕ್ಷಣ’ ಆಗಿರಲಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ಈ ಸಭೆ ನಡೆಯಲಿದೆ ಎಂದು ಕಾಂಗ್ರೆಸ್‌ನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್ ಹಾಗೂ ಜೈರಾಮ್ ರಮೇಶ್ ಅವರು ಮಾಹಿತಿ ನೀಡಿದರು.
ಇಂದು ಮಧ್ಯಾಹ್ನ 2.30ಕ್ಕೆ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದ್ದು, ರಾಜ್ಯಗಳ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆಯ ತಂತ್ರಗಳ ಬಗ್ಗೆ ಚರ್ಚೆ ನಡೆಯಲಿದೆ.
‘ಕಾಂಗ್ರೆಸ್ ಅಧ್ಯಕ್ಷರು ಇರಲಿದ್ದಾರೆ. ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ಶಾಶ್ವತ ಹಾಗೂ ವಿಶೇಷ ಪ್ರತಿನಿಧಿಗಳು ಸೇರಿ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಪಾಲ್ಗೊಳ್ಳಲಿದ್ದಾರೆ’ ಎಂದು ವೇಣುಗೋಪಾಲ್ ಹೇಳಿದ್ದಾರೆ.
‘ನಾವು 90 ಮಂದಿಗೆ ಆಹ್ವಾನ ನೀಡಿದ್ದೇವೆ. ಈ ಪೈಕಿ 6 ಮಂದಿ ವೈಯಕ್ತಿಕ ಕಾರಣ ನೀಡಿ ಬರುವುದಿಲ್ಲ ಎಂದು ಹೇಳಿದ್ದಾರೆ. 4 ಮುಖ್ಯಮಂತ್ರಿಗಳು ಸೇರಿ 84 ಮಂದಿ ಭಾಗಿಯಾಗಲಿದ್ದಾರೆ’ ಎಂದು ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.
ಭಾನುವಾರ ನಡೆಯಲಿರುವ ಸಭೆಯಲ್ಲಿ, ಎಲ್ಲಾ ರಾಜ್ಯಗಳ ಪಕ್ಷದ ಅಧ್ಯಕ್ಷರು ಹಾಗೂ ಸಿಎಲ್‌ಪಿ ನಾಯಕರು, ಸಂಸದೀಯ ಪಕ್ಷದ ಪದಾಧಿಕಾರಿಗಳು, ಕೇಂದ್ರ ಚುನಾವಣಾ ಸಮಿತಿ ಸದಸ್ಯರಿಗೆ ಆಹ್ವಾನ ನೀಡಲಾಗಿದೆ. ಮುಂಬರುವ ಚುನಾವಣೆಯ ತಂತ್ರಗಾರಿಕೆಯ ಬಗ್ಗೆ ಅದರಲ್ಲಿ ಚರ್ಚಿಸಲಾಗುವುದು. 159 ಮಂದಿಗೆ ಆಹ್ವಾನ ನೀಡಲಾಗಿದ್ದು, 147 ಮಂದಿ ಭಾಗವಹಿಸಲಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ಭಾನುವಾರ ಸಂಜೆ ತೆಲಂಗಾಣ ರಾಷ್ಟ್ರೀಯ ಏಕೀಕರಣ ದಿನದ ಅಂಗವಾಗಿ ಮೆಗಾ ರ‍್ಯಾಲಿ ನಡೆಯಲಿದ್ದು, ಆ ಸಮಾವೇಶದಲ್ಲಿ ತೆಲಂಗಾಣ ಚುನಾವಣೆಯ 6 ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗುವುದು ಎಂದು ವೇಣುಗೋಪಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.