ತಿರುವನಂತಪುರ: ಸಿಪಿಐ(ಎಂ) ಮತ್ತು ಬಿಜೆಪಿಯಿಂದ ತೀವ್ರ ಟೀಕೆಯ ಬೆನ್ನಲ್ಲೇ ಕೇರಳ ಕಾಂಗ್ರೆಸ್, ಲೋಕಸಭೆ ಚುನಾವಣೆಗೆ ಎಸ್‌ಡಿಪಿಐ ಪಕ್ಷ ನೀಡಿದ್ದ ಸಂಘಟನಾತ್ಮಕ ಬೆಂಬಲವನ್ನು ತಿರಸ್ಕರಿಸಿದೆ.
‘ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ಕೋಮುವಾದವನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಈ ಹಿನ್ನೆಲೆಯಲ್ಲಿ ಎಸ್‌ಡಿಪಿಐ ನೀಡಿದ್ದ ಬೆಂಬಲವನ್ನು ಪರಿಶೀಲನೆ ಬಳಿಕ ತಿರಸ್ಕರಿಸಲಾಗಿದೆ’ ಎಂದು ಅವರು ಹೇಳಿದರು. ‘ಪ್ರತಿಯೊಬ್ಬರು ವೈಯಕ್ತಿಕ ಇಚ್ಛೆಯಂತೆ ಯುಡಿಎಫ್‌ಗೆ ಮತ ಹಾಕುವುದನ್ನು ನಾವು ಸ್ವಾಗತಿಸುತ್ತೇವೆ. ಸಂಘಟನೆ ವಿಷಯದಲ್ಲಿ ಇದು ನಮ್ಮ ನಿಲುವು’ಎಂದು ಅವರು ಹೇಳಿದ್ದಾರೆ.
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಸಂಘಟನೆಯ ರಾಜಕೀಯ ಪಕ್ಷ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು(ಎಸ್‌ಡಿಪಿಐ) ಸೋಮವಾರ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ಗೆ(ಯುಡಿಎಫ್) ಬೆಂಬಲ ಘೋಷಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಎಸ್‌ಡಿಪಿಐ ಮತ್ತು ಯುಡಿಎಫ್ ನಡುವೆ ಒಪ್ಪಂದ ಏರ್ಪಟ್ಟಂತೆ ಕಾಣುತ್ತಿದೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಕಣ್ಣೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಸುಧಾಕರನ್ ಅವರು, ಎಸ್‌ಡಿಪಿಐ ಬೆಂಬಲವನ್ನು ಅಂಗೀಕರಿಸಿದ್ದಾರೆ. ಇದು ಯುಡಿಎಫ್‌ನ ಅವಕಾಶವಾದಿ ನಡೆಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದರು.
ರಾಹುಲ್ ಗಾಂಧಿಯವರು ಎಸ್‌ಡಿಪಿಐ ಬೆಂಬಲವನ್ನು ಅಂಗೀಕರಿಸಿರುವುದು ಆಘಾತ ತಂದಿದೆ. ಈ ಮೂಲಕ ಅವರು ನಾಮಪತ್ರ ಸಲ್ಲಿಸುವ ವೇಳೆ ಸಂವಿಧಾನದ ಹೆಸರಿನಲ್ಲಿ ತೆಗೆದುಕೊಂಡ ಪ್ರತಿಜ್ಞೆಯನ್ನು ಮುರಿದಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.