ADVERTISEMENT

Jharkhand Elections | 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಪಿಟಿಐ
Published 22 ಅಕ್ಟೋಬರ್ 2024, 2:50 IST
Last Updated 22 ಅಕ್ಟೋಬರ್ 2024, 2:50 IST
   

ನವದೆಹಲಿ: ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಎಸ್‌ಟಿ ಮೀಸಲು ಕ್ಷೇತ್ರ ಲೋಹಾರದಂಗದಿಂದ ಹಣಕಾಸು ಸಚಿವ ರಾಮೇಶ್ವರ ಓರಾನ್ ಅವರನ್ನು ಕಣಕ್ಕಿಳಿಸಿದೆ.

ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ತ್ರಿಪುರಾ, ಒಡಿಶಾ ಹಾಗೂ ನಾಗಾಲ್ಯಾಂಡ್‌ನಲ್ಲಿ ಪಕ್ಷದ ಉಸ್ತುವಾರಿಯಾಗಿರುವ ಅಜಯ್ ಕುಮಾರ್ ಅವರು ಜೆಮ್ಶೆಡ್‌ಪುರ ಪೂರ್ವ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ಅಜಯ್ ಕುಮಾರ್ ಅವರು ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಈ ಹಿಂದೆ ಜೆಮ್ಶೆಡ್‌ಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಈ ಬಾರಿ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ.

ADVERTISEMENT

ಓರಾನ್ ಸಹ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಜಾರ್ಖಂಡ್ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷರೂ ಹೌದು.

ಉಳಿದಂತೆ, ಶಿಪ್ಲಿ ನೇಹಾ ಟಿರ್ಕಿ ಅವರನ್ನು ಮಂದಾರ(ಎಸ್‌ಟಿ ಮೀಸಲು) ಕ್ಷೇತ್ರದಿಂದ ಕಣಕ್ಕಿಳಿಸಿದೆ. ನೇಹಾ ಇದೇ ಕ್ಷೇತ್ರದ ಶಾಸಕರೂ ಹೌದು. ನೇಹಾ ಅವರ ತಂದೆ ಬಂಧು ಟಿರ್ಕಿ ಜಾರ್ಖಂಡ್‌ನ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದಾರೆ.

ಇದಕ್ಕೂ ಮುನ್ನ, ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರೊಂದಿಗೆ ಅಭ್ಯರ್ಥಿಗಳ ಕುರಿತಂತೆ ಚರ್ಚೆ ನಡೆಸಲಾಗಿತ್ತು.

ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಪಕ್ಷವು ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಪ್ರಸ್ತುತ ರಾಜ್ಯದಲ್ಲಿ ಅಧಿಕಾರವನ್ನು ಹಂಚಿಕೊಂಡಿವೆ.

ಜಾರ್ಖಂಡ್ ಚುನಾವಣೆಯು ನವೆಂಬರ್ 13 ಮತ್ತು ನವೆಂಬರ್ 20ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.