ಗೋವಾ: ಪಕ್ಷದ ವಿರುದ್ಧ ಷಡ್ಯಂತರ ನಡೆಸುತ್ತಿರುವ ಆರೋಪದಡಿ ಕಾಂಗ್ರೆಸ್ ಪಕ್ಷವು ಮೈಕಲ್ ಲೋಬೊ ಅವರನ್ನು ಗೋವಾ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಭಾನುವಾರ ವಜಾಗೊಳಿಸಿದೆ.
‘ಅಧಿಕಾರದ ಆಸೆಯಿಂದ ಲೋಬೊ ಹಾಗೂ ದಿಗಂಬರ ಕಾಮತ್ ಅವರು ಬಿಜೆಪಿ ಜೊತೆ ಸೇರಿಕೊಂಡು ಕಾಂಗ್ರೆಸ್ ವಿರುದ್ಧವೇ ಷಡ್ಯಂತರ ನಡೆಸುತ್ತಿದ್ದಾರೆ. ಪಕ್ಷದ ಶಕ್ತಿಯನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದರು. ಹೀಗಾಗಿ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಎಐಸಿಸಿ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
‘ಲೋಬೊ ಹಾಗೂ ಕಾಮತ್ ಅವರು ಪಕ್ಷದಲ್ಲಿ ಇದ್ದುಕೊಂಡೇ ಬಿಜೆಪಿ ಪರ ಕೆಲಸ ಮಾಡುತ್ತಿದ್ದರು. ಕಾಮತ್ ಅವರ ಮೇಲೆ ಹಲವು ಪ್ರಕರಣಗಳು ಇದ್ದವು. ಇದರಿಂದ ಪಾರಾಗುವ ಸಲುವಾಗಿ ಅವರು ಬಿಜೆಪಿ ಜೊತೆ ಕೈಜೋಡಿಸಿದ್ದರು. ಲೋಬೊ ಅವರು ಅಧಿಕಾರದ ಆಸೆಗಾಗಿ ವಿರೋಧಿಗಳ ಪರ ಕೆಲಸ ಮಾಡುತ್ತಿದ್ದರು. ರಾಜ್ಯದಲ್ಲಿ ವಿರೋಧ ಪಕ್ಷಗಳ ಅಸ್ತಿತ್ವವೇ ಇಲ್ಲದಂತೆ ಮಾಡುವುದು ಬಿಜೆಪಿ ಉದ್ದೇಶ. ಇದಕ್ಕಾಗಿ ನಮ್ಮ ಪಕ್ಷದ ಇಬ್ಬರು ನಾಯಕರನ್ನು ಬಳಸಿಕೊಂಡಿದೆ’ ಎಂದು ಅವರು ದೂರಿದ್ದಾರೆ.
ಕಾಂಗ್ರೆಸ್ ಶಾಸಕರಾದ ಲೋಬೊ, ದಿಗಂಬರ ಕಾಮತ್, ಡೆಲಿಲಾ ಲೋಬೊ, ಕೇದಾರ್ ನಾಯ್ಕ ಹಾಗೂ ರಾಜೇಶ್ ಫಾಲ್‌ದೇಸಾಯಿ ಅವರು ಗೋವಾ ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿ ಪಕ್ಷ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದರು ಎಂದು ಹೇಳಲಾಗಿತ್ತು.
‘ಶನಿವಾರ ನಡೆದಿದ್ದ ಪಕ್ಷದ ಶಾಸಕರ ಸಭೆಯಿಂದ ಕಾಮತ್ ದೂರ ಉಳಿದಿದ್ದರು’ ಎಂದು ಮೂಲಗಳು ತಿಳಿಸಿವೆ.
ಹಿಂದಿನ ವಿಧಾನಸಭೆ ಚುನಾವಣೆ ವೇಳೆ ದಿಗಂಬರ ಕಾಮತ್ ಅವರನ್ನು ಕಾಂಗ್ರೆಸ್ ಪಕ್ಷವು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.
ವಿಧಾನಸಭೆ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್‌ನ ಎಂಟು ಮಂದಿ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದನ್ನು ಕಾಂಗ್ರೆಸ್ ನಾಯಕರು ತಳ್ಳಿಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.