ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌ನ ಚುನಾವಣಾ ನೀತಿ ತಜ್ಞರಾಗಿರುವ ಸುನೀಲ್ ಕನುಗೋಲು ಅವರು ಇಲ್ಲಿನ ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಮಧ್ಯಪ್ರದೇಶಕ್ಕೆ ತೆರಳಲಿದ್ದಾರೆ. ಅಲ್ಲಿ, ಪಕ್ಷದ ಚುನಾವಣಾ ಸಿದ್ಧತೆ ಮತ್ತು ಯೋಜನೆಗಳನ್ನು ರೂಪಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಬಳ್ಳಾರಿಯವರಾದ ಸುನೀಲ್ ಕನುಗೋಲು ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಅವರ ತಂಡದಲ್ಲಿ ಕೆಲಸ ಮಾಡಿದ್ದರು.
ಈ ವರ್ಷ ನವೆಂಬರ್‌ನಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಮೇ 10ರಂದು ಚುನಾವಣೆ ನಿಗದಿಯಾಗಿದ್ದು ಕನುಗೋಲು ಅವರು ಕಾಂಗ್ರೆಸ್‌ನ ಪ್ರಚಾರಕ್ಕೆ ಸಂಬಂಧಿಸಿದ ಯೋಜನೆ ರೂಪಿಸುವಲ್ಲಿ ನಿರತರಾಗಿದ್ದಾರೆ.
ಕರ್ನಾಟಕದಲ್ಲಿ ಚುನಾವಣೆ ಮುಗಿಯುತ್ತಲೇ ಮಧ್ಯಪ್ರದೇಶಕ್ಕೆ ತೆರಳಲಿರುವ ಕನುಗೋಲು, ಅಲ್ಲಿ ಕಚೇರಿಯನ್ನೂ ತೆರೆಯಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಕನುಗೋಲು ಅವರು ಈ ಮೊದಲು ಪ್ರಧಾನಿ ಮೋದಿ ಅವರಿಗಾಗಿ ಕೆಲಸ ಮಾಡಿದ್ದರು. ಸದ್ಯ ಕಾಂಗ್ರೆಸ್ ಪರವಾಗಿ ಯೋಜನೆ ರೂಪಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ ಜೋಡೊ ಯಾತ್ರೆಗೂ ಕನುಗೋಲು ಕೆಲಸ ಮಾಡಿದ್ದಾರೆ.
'ವಿಧಾನಸಭಾ ಚುನಾವಣೆಯ ತಯಾರಿಯಲ್ಲಿ ವೃತ್ತಿಪರ ತಂತ್ರಜ್ಞರ ನೆರವು ಅಗತ್ಯ. ಆದರೆ, ಜಾತಿ ಸಮೀಕರಣಗಳೂ ಸೇರಿದಂತೆ ಮಧ್ಯಪ್ರದೇಶದ ಆಂತರಿಕ ರಾಜಕೀಯ ಪರಿಸ್ಥಿತಿಯು ಚುನಾವಣಾ ತಂತ್ರಜ್ಞರ ಕೆಲಸವನ್ನು ಹೆಚ್ಚು ಸಂಕೀರ್ಣಗೊಳಿಸುತ್ತದೆ. ಬಹುಶಃ, ಕಾಂಗ್ರೆಸ್ ತನ್ನದೇ ಆದ ಚುನಾವಣಾ ನಿರ್ವಹಣಾ ಕಾರ್ಯವಿಧಾನವನ್ನು ನಿರ್ಮಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ’ ಎಂದು ಹಿರಿಯ ಪತ್ರಕರ್ತ ರಶೀದ್ ಕಿದ್ವಾಯಿ ಅವರು ಪಿಟಿಐಗೆ ತಿಳಿಸಿದರು.
‘ಪಕ್ಷದ ಪ್ರಚಾರ ಯೋಜನೆ ರೂಪಿಸುವಲ್ಲಿ ಕನುಗೋಲು ಪ್ರಮುಖ ಪಾತ್ರ ವಹಿಸಲಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ. ಅವರು ಉತ್ತರ ಪ್ರದೇಶದಲ್ಲಿ ಬಿಜೆಪಿಗಾಗಿ ಕೆಲಸ ಮಾಡಿದ್ದರು. 2017ರಲ್ಲಿ ಯೋಗಿ ಆದಿತ್ಯನಾಥ್ ಅವರ ಪ್ರಚಂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
2018ರ ನವೆಂಬರ್‌ನಲ್ಲಿ ನಡೆದಿದ್ದ ಮಧ್ಯಪ್ರದೇಶ ಚುನಾವಣೆಯಲ್ಲಿ 230 ಕ್ಷೇತ್ರಗಳ ಪೈಕಿ 114 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್, ಕಮಲನಾಥ್ ಅವರ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿತ್ತು. 2020ರ ಮಾರ್ಚ್‌ನಲ್ಲಿ ಜೋತಿರಾದಿತ್ಯ ಬೆಂಬಲಿಗ ಕಾಂಗ್ರೆಸ್ ಶಾಸಕರು ಬಂಡೆದ್ದು ಬಿಜೆಪಿ ಜತೆ ಕೈಜೋಡಿಸಿದರು. ಅದರೊಂದಿಗೆ ಕಮಲನಾಥ್ ಸರ್ಕಾರ ಪತನಗೊಂಡು, ಶಿವರಾಜ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೇರುವಲ್ಲಿ ಸಫಲವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.