ಭೋಪಾಲ್: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಗೂಡ್ಸ್ ರೈಲು ಹರಿದು ಮೃತಪಟ್ಟ ಕಾರ್ಮಿಕರು ಊರಿಗೆ ಮರಳಲು ಪ್ರಯಾಣದ ಪಾಸ್ ನೀಡುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಈ ಕುರಿತು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಊರಿಗೆ ಮರಳಲು ಪಾಸ್‌ಗಾಗಿ ಅರ್ಜಿ ಸಲ್ಲಿಸಿದ್ದೆವು ಎಂದು ರೈಲು ಅಪಘಾತದ ವೇಳೆ ಬದುಕುಳಿದ ಕಾರ್ಮಿಕರೊಬ್ಬರು ಹೇಳಿದ ವಿಡಿಯೊವನ್ನು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
‘ಮಧ್ಯಪ್ರದೇಶ ಸರ್ಕಾರದ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆಯೇ ಕಾರ್ಮಿಕರ ಸಾವಿಗೆ ಕಾರಣ. ಊರಿಗೆ ವಾಪಸಾಗಲು ಕಾರ್ಮಿಕರು ಮನವಿ ಸಲ್ಲಿಸಿದ ಬಳಿಕ ಅವರನ್ನು ಕರೆತರಲು ಸರ್ಕಾರ ಏನು ವ್ಯವಸ್ಥೆ ಮಾಡಿದೆ ಎಂಬ ಬಗ್ಗೆ ತನಿಖೆಯಾಗಬೇಕು’ ಎಂದೂ ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ.
‘ಪಾಸ್ ನೀಡಿದ್ದರೆ ರೈಲು ದುರಂತದಲ್ಲಿ ಮೃತಪಟ್ಟ 16 ಜೀವಗಳನ್ನು ರಕ್ಷಿಸಬಹುದಾಗಿತ್ತು. ಶಿವರಾಜ್ ಜಿ, ಈ ಸಾವುಗಳು ಜಂಗಲ್‌ರಾಜ್‌ನ ಪರಿಣಾಮ’ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಕೂಡ ಟ್ವೀಟ್ ಮಾಡಿದೆ.
ಮಹಾರಾಷ್ಟ್ರದ ಔರಂಗಾಬಾದ್‌ನ ಕರ್ಮಾಡ್ ಸಮೀಪ ಶುಕ್ರವಾರ ಬೆಳಿಗ್ಗೆ ರೈಲು ಹಳಿಯ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 16 ಮಂದಿ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.