ನವದೆಹಲಿ: ದೆಹಲಿ ಅಬಕಾರಿ ನೀತಿ ವಿವಾದಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದೆ.
ಪ್ರಸ್ತುತ ಸಮಸ್ಯೆಯು ಅಬಕಾರಿ ನೀತಿಗೆ ಸಂಬಂಧಪಟ್ಟಿದೆ. ಆದರೆ, ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಶಿಕ್ಷಣ ನೀತಿ ಕುರಿತು ಚರ್ಚಿಸುತ್ತಿದೆ. ಇದರ ಹಿಂದೆ ಅಡಗಿಕೊಳ್ಳುವ ಕೆಲಸವನ್ನು ಎಎಪಿ ನಿಲ್ಲಿಸಬೇಕೆಂದು ಕಾಂಗ್ರೆಸ್ ಹೇಳಿದೆ.
ಈ ಹಗರಣದಲ್ಲಿ ಬಿಜೆಪಿಯ ಸಹಭಾಗಿತ್ವವೂ ಇದೆ. ದೆಹಲಿಯಲ್ಲಿ ಮದ್ಯದಂಗಡಿಗಳನ್ನು ಮಂಜೂರು ಮಾಡಿದ ಕಂಪನಿಯು ಕಪ್ಪು ಪಟ್ಟಿಯಲ್ಲಿರುವ ಮಧ್ಯಪ್ರದೇಶ ಮೂಲದ್ದಾಗಿದೆ. ಅದು ಬಿಜೆಪಿಗೆ ‘ಪ್ರಮುಖ ದಾನಿ’ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಕಪ್ಪುಪಟ್ಟಿಯಲ್ಲಿರುವ ಕಂಪನಿಯ ಹೆಸರನ್ನು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲ್ಲ. ಇದು ಏಕೆ ಎಂಬುದಾಗಿ ನಾವು ತಿಳಿದುಕೊಳ್ಳಲು ಬಯಸುತ್ತೇವೆ’ ಎಂದು ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲ್ ಚೌಧರಿ ಹೇಳಿದ್ದಾರೆ.
ಈ ವಿಚಾರದ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ, ‘ಶಿಕ್ಷಣ ನೀತಿ ಚರ್ಚೆಯ ಹಿಂದೆ ಎಎಪಿ ಅಡಗಿಕೊಳ್ಳುವುದನ್ನು ನಿಲ್ಲಿಸಬೇಕು. ಅಬಕಾರಿ ನೀತಿಯ ಬಗ್ಗೆ ಇಲ್ಲಿ ಚರ್ಚೆಯಾಗಬೇಕಿದೆ. ದೆಹಲಿಯನ್ನು ಹೇಗೆ ದೇಶದ ಮದ್ಯದ ರಾಜಧಾನಿಯನ್ನಾಗಿ ಪರಿವರ್ತಿಸಲಾಗಿದೆ ಎಂಬುದು ನಮಗೆ ತಿಳಿಯಬೇಕು’ ಎಂದು ವಾಗ್ದಾಳಿ ನಡೆಸಿದ್ದಾರೆ.
ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಪ್ರಾಮಾಣಿಕರಾಗಿದ್ದರೆ, ಎಎಪಿ ಬೆಂಬಲಿಗರು ಒಗ್ಗಟ್ಟಿನಿಂದ ಏಕೆ ಪ್ರತಿಭಟನೆ ಮಾಡುತ್ತಿಲ್ಲ ಎಂದು ದೆಹಲಿ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಪ್ರಶ್ನಿಸಿದ್ದಾರೆ.
‘ವಾಸ್ತವದಲ್ಲಿ ಅವರು ಭ್ರಷ್ಟರು. ಅವರು ಇನ್ನೂ ದೆಹಲಿ ಕ್ಯಾಬಿನೆಟ್‌ನಲ್ಲಿ ಹೇಗೆ ಇದ್ದಾರೆ ಎಂದು ನಾವು ಕೇಳಲು ಬಯಸುತ್ತೇವೆ. ಅವರ ರಾಜೀನಾಮೆಗೆ ನಾವು ಒತ್ತಾಯಿಸುತ್ತೇವೆ’ ಎಂದು ಲಂಬಾ ಹೇಳಿದ್ದಾರೆ.
ಅಬಕಾರಿ ನೀತಿ ಪ್ರಕರಣದ ಸಂಬಂಧ ಸಿಸೋಡಿಯಾ ಸೇರಿದಂತೆ ಸಿಬಿಐನ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ 13 ಮಂದಿಗೆ ಎಲ್‌ಒಸಿ ಜಾರಿ ಮಾಡಲಾಗಿದೆ ಎಂದು ವರದಿಯಾಗಿತ್ತು.
ಇದನ್ನು ಅಲ್ಲಗಳೆದಿರುವ ಸಿಬಿಐ, ‘ಸಿಸೋಡಿಯಾ ಸಾರ್ವಜನಿಕ ವ್ಯಕ್ತಿ. ಅವರಿಗೆ ಎಲ್‌ಒಸಿ ಜಾರಿ ಮಾಡುವ ಬಗ್ಗೆ ಯೋಚಿಸಿಯೇ ಇಲ್ಲ‘ ಎಂದು ಸ್ಪಷ್ಟಪಡಿಸಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.