ನವದೆಹಲಿ: ರಫೇಲ್ ಯುದ್ಧ ವಿಮಾನಗಳ ಮಾರಾಟಕ್ಕೆ ಸಂಬಂಧಿಸಿ ಭಾರತದ ಮಧ್ಯವರ್ತಿಗೆ ₹94.93 ಕೋಟಿ (1.1 ಮಿಲಿಯನ್ ಯೂರೊ) ‘ಕೊಡುಗೆ’ ನೀಡಲಾಗಿದೆ ಎಂದು ಫ್ರಾನ್ಸ್‌ನ ವೈಮಾನಿಕ ಸಂಸ್ಥೆ ಡಸಾಲ್ಟ್ ಹೇಳಿದೆ. ಭ್ರಷ್ಟಾಚಾರ ವಿರೋಧಿ ಸಂಸ್ಥೆ (ಎಎಫ್‌ಎ) ಹೇಳಿಕೆ ಆಧರಿಸಿ ಫ್ರಾನ್ಸ್‌ನ ‘ಮೀಡಿಯಾಪಾರ್ಟ್’ ಈ ಕುರಿತು ವರದಿ ಮಾಡಿದೆ.
2016ರಲ್ಲಿ ಭಾರತ ಖರೀದಿಸಿದ್ದ 36 ರಫೇಲ್ ಯುದ್ಧ ವಿಮಾನಗಳ ವಹಿವಾಟಿಗೆ ಸಂಬಂಧಿಸಿ ವರದಿಯಾಗಿದೆ. ಯುದ್ಧವಿಮಾನಗಳನ್ನು ಪೂರೈಸಿದ್ದ ಡಸಾಲ್ಟ್ ಸಂಸ್ಥೆ, ಈ ಹಣವನ್ನು ರಫೇಲ್ ಜೆಟ್‍ನ ಮಾದರಿಗಳ ತಯಾರಿಕೆಗೆ ನೀಡಲಾಗಿತ್ತು ಎಂದು ಕಾರಣ ನೀಡಿದೆ. ಆದರೆ, ಜೆಟ್‍ಗಳನ್ನು ಪೂರೈಸಿರುವುದಕ್ಕೆ ಪೂರಕವಾಗಿ ಯಾವುದೇ ದಾಖಲೆಗಳು ಅಥವಾ ಛಾಯಾಚಿತ್ರಗಳನ್ನು ಸಂಸ್ಥೆಯು ಒದಗಿಸಿಲ್ಲ ಎಂದು ವರದಿಯು ಹೇಳಿದೆ.
ಈ ಮಧ್ಯವರ್ತಿಯು ಭಾರತದಲ್ಲಿ ನಡೆದಿರುವ, ರಕ್ಷಣಾ ಪರಿಕರ ಖರೀದಿಯ ಇನ್ನೊಂದು ವಹಿವಾಟಿನಲ್ಲಿಯೂ ಆರೋಪಿಯಾಗಿದ್ದಾರೆ ಎಂದು ತನ್ನ ವರದಿಯಲ್ಲಿ ಮೀಡಿಯಾಪಾರ್ಟ್ ಉಲ್ಲೇಖಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಕಾಂಗ್ರೆಸ್ ವಾಗ್ದಾಳಿ: ಫ್ರಾನ್ಸ್ ಮಾಧ್ಯಮಗಳ ಈ ವರದಿಯನ್ನೇ ಉಲ್ಲೇಖಿಸಿ ಪ್ರಧಾನಿ ನರೇಂದ್ರಮೋದಿ ಅವರ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಪಕ್ಷ, ಈ ಕುರಿತು ಹೇಳಿಕೆಯನ್ನು ನೀಡಬೇಕು ಎಂದು ಒತ್ತಾಯಿಸಿದೆ.
ಮಧ್ಯವರ್ತಿಗಳ ಉಪಸ್ಥಿತಿಯಿಂದಾಗಿ ಯುದ್ಧ ವಿಮಾನಗಳ ಖರೀದಿಯಲ್ಲಿ ರಕ್ಷಣಾ ಪರಿಕರಗಳ ಖರೀದಿ ಪ್ರಕ್ರಿಯೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ಕಾಂಗ್ರೆಸ್ ಪಕ್ಷ ಆರೋಪಿಸಿದೆ. ರಫೇಲ್ ಯುದ್ಧ ವಿಮಾನಗಳ ಖರೀದಿ ವಹಿವಾಟಿನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ತನ್ನ ಆರೋಪವನ್ನು ಮತ್ತೆ ಪುನರುಚ್ಛರಿಸಿದೆ.
‘ಫ್ರಾನ್ಸ್‌ನ ಡಸಾಲ್ಟ್ ಸಂಸ್ಥೆಯು 1.1 ಮಿಲಿಯನ್ ಯೂರೊ ಅನ್ನು`ಕೊಡುಗೆ’ ನೀಡಲಾಗಿದೆ' ಎಂದು ವರದಿಯಲ್ಲಿ ತೋರಿಸಿದೆ. ಇದು, ವಾಸ್ತವವಾಗಿ ರಫೇಲ್ ವಹಿವಾಟಿನಲ್ಲಿ ಮಧ್ಯವರ್ತಿಗಳಿಗೆ ನೀಡಿದ ಕಮಿಷನ್ ಮೊತ್ತವೇ?’ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಪ್ರಶ್ನಿಸಿದ್ದಾರೆ.
ರಫೇಲ್ ಯುದ್ಧ ವಿಮಾನಗಳ ಖರೀದಿ ವಹಿವಾಟಿನಲ್ಲಿ ಕೊಡುಗೆ ನೀಡಿರುವ ಕುರಿತ ಸಂಸ್ಥೆಯ ಹೇಳಿಕೆ ಹಿನ್ನೆಲೆಯಲ್ಲಿ ಈ ವಹಿವಾಟಿನ ಭ್ರಷ್ಟಾಚಾರದ ಆರೋಪ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಫ್ರಾನ್ಸ್ ಮೀಡಿಯಾಪಾರ್ಟ್.ಎಫ್‍ಆರ್ ವೆಬ್‍ಸೈಟ್ ಈ ಕುರಿತು ವರದಿ ಮಾಡಿದೆ. ಅದರ ಪ್ರಕಾರ, ಫ್ರಾನ್ಸ್‌ನ ಭ್ರಷ್ಟಾಚಾರ ವಿರೋಧಿ ಸಮಿತಿ ಫ್ರಾಂಕೈಸ್ ಆಂಟಿ ಕರಪ್ಷನ್ (ಎಎಫ್‍ಎ) ‘ಕೊಡುಗೆ’ ಶೀರ್ಷಿಕೆಯಲ್ಲಿ ಡಸಾಲ್ಟ್ ಏವಿಯೇಷನ್ ಸಂಸ್ಥೆಯು 5,08,925 ಯೂರೊ ವ್ಯಯಿಸಿರುವ ಕುರಿತು ಆಕ್ಷೇಪವನ್ನು ಎತ್ತಿದೆ.
ವರದಿಯ ಅನುಸಾರ, ‘ಕೊಡುಗೆ’ ಕುರಿತ ಮಾಹಿತಿಗೆ ಪೂರಕವಾಗಿ ಡಸಾಲ್ಟ್ ಸಂಸ್ಥೆಯು, ಭಾರತೀಯ ಕಂಪನಿಯಾದ ಡೆಫಿಸಿಸ್ ಸಲ್ಯೂಷನ್ಸ್ ಸಂಸ್ಥೆಯ ಇನ್‍ವಾಯ್ಸ್ ಅನ್ನು ಉಲ್ಲೇಖಿಸಿತ್ತು.
‘ಈ ಇನ್‌ವಾಯ್ಸ್ ವಹಿವಾಟಿನ ಒಟ್ಟು ಆದೇಶದ ಮೊತ್ತದ (1,017,850 ಯೂರೊ) ಶೇ 50ರಷ್ಟು ಆಗಿದ್ದು, 50 ರಫೆಲ್ ಸಿ ಯುದ್ಧ ವಿಮಾನದ ತಯಾರಿಕೆಗೆ ಸಂಬಂಧಿಸಿದ್ದಾಗಿದೆ. ಪ್ರತಿ ವಿಮಾನದ ದರ 20,357 ಯೂರೊ ಆಗಿದೆ’ ಎಂದು ಎಎಫ್‍ಎ ಹೇಳಿಕೆಯನ್ನು ಆಧರಿಸಿ ವೆಬ್‍ಸೈಟ್ ವರದಿ ಮಾಡಿದೆ.
‘ಡಸಾಲ್ಟ್ ಸಂಸ್ಥೆಯು, 59 ರಫೇಲ್ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದ ಭಾರತೀಯ ಸಂಸ್ಥೆಗೆ ಕೊಡುಗೆ ನೀಡಿದ್ದಾಗಿ ಭ್ರಷ್ಟಾಚಾರ ವಿರೋಧಿ ಸಂಸ್ಥೆಗೆ ತಿಳಿಸಿದೆ. ಸ್ವತಃ ಜೆಟ್ ತಯಾರಿಕಾ ಸಂಸ್ಥೆಯಾಗಿ ಭಾರತೀಯ ಸಂಸ್ಥೆ ಜೊತೆಗೆ ಏಕೆ ಕೈಜೋಡಿಸಬೇಕು ಎಂದು ಫ್ರಾನ್ಸ್‌ನ ಅಧಿಕಾರಿಗಳು ಪ್ರಶ್ನಿಸಿದಾಗ ಡಸಾಲ್ಟ್ ಸಂಸ್ಥೆಯಿಂದ ಸಮಾಧಾನಕರವಾದ ಉತ್ತರ ಬಂದಿಲ್ಲ’ ಎಂದು ಸುರ್ಜೇವಾಲಾ ಅವರು ಹೇಳಿದ್ದಾರೆ.
‘ವರದಿಯಲ್ಲಿ ಉಲ್ಲೇಖಿಸಿರುವ ಭಾರತದ ಡೆಫಿಸಿಸ್ ಸಲ್ಯೂಷನ್ಸ್ ಸಂಸ್ಥೆ ವಾಸ್ತವವಾಗಿ ವಿಮಾನಗಳ ಸಿಮ್ಯುಲೇಟರ್ ಗಳ ಜೋಡಣೆ, ಆಪ್ಟಿಕಲ್ ಮತ್ತು ವಿದ್ಯುನ್ಮಾನ ವ್ಯವಸ್ಥೆ ಜೋಡಣೆ ಕಾರ್ಯ ನಡೆಸಲಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಈಗ ಡಸಾಲ್ಟ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವರೇ’ ಎಂದು ಪ್ರಶ್ನಿಸಿದ್ದಾರೆ.
ರಫೇಲ್ ವಹಿವಾಟಿನಲ್ಲಿ ಮಧ್ಯವರ್ತಿಗಳ ಪಾತ್ರ ಇರುವುದಕ್ಕೆ ಸಾಕ್ಷ್ಯ ದೊರೆತಿದೆ. ಹೀಗಾಗಿ, ಸಂಪೂರ್ಣ ತನಿಖೆಗೆ ಆದೇಶಿಸಬೇಕು. ಸರ್ಕಾರ ಮತ್ತು ಸರ್ಕಾರದ ನಡುವೆ ನಡೆಯುವ ರಕ್ಷಣಾ ಖರೀದಿ ವಹಿವಾಟಿನಲ್ಲಿ ‘ಮಧ್ಯವರ್ತಿ’ ಮತ್ತು ‘ಕಮಿಷನ್ ಪಾವತಿ’ ನುಸುಳಲು ಹೇಗೆ ಸಾಧ್ಯ? ಎಂದು ಸುರ್ಜೇವಾಲಾ ಅವರು ಪ್ರಶ್ನಿಸಿದ್ದಾರೆ.
ಈ ಹಿಂದೆ ರಕ್ಷಣಾ ಸಚಿವರಾಗಿದ್ದ ಎ.ಕೆ.ಆಂಟನಿ ಅವರು, ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಒಪ್ಪಂದವನ್ನು ರದ್ದುಪಡಿಸಿದ್ದರು ಹಾಗೂ ಭಾರತೀಯ ರಕ್ಷಣಾ ಮಾರುಕಟ್ಟೆಯಲ್ಲಿ ಕಂಪನಿ ಭಾಗವಹಿಸದಂತೆ ಕಪ್ಪುಪಟ್ಟಿಗೆ ಸೇರಿಸಿದ್ದರು ಎಂಬುದನ್ನು ಕಾಂಗ್ರೆಸ್ ಪಕ್ಷ ಪ್ರಮುಖವಾಗಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.