ADVERTISEMENT

ಕಾಂಗ್ರೆಸ್‌ನ ಐವರು ನಾಯಕರ ಟ್ವಿಟರ್‌ ಖಾತೆ ಲಾಕ್‌

ಪಿಟಿಐ
Published 12 ಆಗಸ್ಟ್ 2021, 6:04 IST
Last Updated 12 ಆಗಸ್ಟ್ 2021, 6:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸರ್ಕಾರದ ಒತ್ತಡಕ್ಕೆ ಮಣಿದು, ನಿಯಮ ಉಲ್ಲಂಘನೆಯ ಆರೋಪ ಹೊರಿಸಿ ತಮ್ಮ ಪಕ್ಷದ ಅಧಿಕೃತ ಟ್ವಿಟರ್ ಖಾತೆಯನ್ನು ನಿರ್ಬಂಧಿಸಿದೆ ಎಂದು ಕಾಂಗ್ರೆಸ್‌ ಪಕ್ಷ ಗುರುವಾರ ಸಾಮಾಜಿಕ ಮಾಧ್ಯಮ ಟ್ವಿಟರ್ ವಿರುದ್ಧ ಆರೋಪಿಸಿದೆ.

ಟ್ವಿಟರ್ ಸಾಮಾಜಿಕ ಮಾಧ್ಯಮ, ಸರ್ಕಾರದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ದೇಶದಾದ್ಯಂತ ನಮ್ಮ ಪಕ್ಷದ 5 ಸಾವಿರಕ್ಕೂ ಹೆಚ್ಚು ನಾಯಕರು ಮತ್ತು ಕಾರ್ಯಕರ್ತರ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಿದೆ. ಟ್ವಿಟರ್‌ ಅಥವಾ ಸರ್ಕಾರದ ಒತ್ತಡಕ್ಕೆ ನಾವು ಅಂಜುವುದಿಲ್ಲ‘ ಎಂದು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ರೋಹನ್ ಗುಪ್ತಾ ಹೇಳಿದ್ದಾರೆ.

ಅಧಿಕೃತ ಟ್ವಿಟರ್‌ ಖಾತೆ ಲಾಕ್‌ ಆಗಿರುವ ಚಿತ್ರಗಳನ್ನು (ಸ್ಕ್ರೀನ್‌ಶಾಟ್‌ಗಳನ್ನು) ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌ ಪಕ್ಷ , ‘ದೆಹಲಿಯ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಪರ ನ್ಯಾಯಕ್ಕಾಗಿ ಧ್ವನಿ ಎತ್ತುವುದು ನಿಯಮಗಳ ಉಲ್ಲಂಘನೆ ಅಥವಾ ಅಪರಾಧವಾದರೆ, ಆ ಅಪರಾಧದಿಂದ ನಾವು ಹಿಂದೆ ಸರಿಯುವುದಿಲ್ಲ‘ ಎಂದು ಪೋಸ್ಟ್‌ ಮಾಡಿದೆ.

ADVERTISEMENT

ಕೇಂದ್ರದ ವಿರುದ್ಧ ಕಾಂಗ್ರೆಸ್‌ ಆರೋಪ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಿದ ನಂತರ, ಬುಧವಾರ ತಡರಾತ್ರಿ ಪಕ್ಷದ ಮಾಧ್ಯಮ ಮುಖ್ಯಸ್ಥ ರಣದೀಪ್ ಸುರ್ಜೆವಾಲಾ ಸೇರಿದಂತೆ ಐವರು ಹಿರಿಯ ನಾಯಕರ ಟ್ವಿಟರ್‌ ಖಾತೆಗಳ ವಿರುದ್ಧವೂ ಇದೇ ರೀತಿ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಗುರುವಾರ ಆರೋಪಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಅಜಯ್ ಮಾಕೆನ್, ಲೋಕಸಭೆಯಲ್ಲಿ ಪಕ್ಷದ ಸಚೇತಕ ಮಾಣಿಕ್ಕಂ ಟಾಗೋರ್, ಅಸ್ಸಾಂ ಉಸ್ತುವಾರಿ ಮತ್ತು ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಟ್ವಿಟರ್ ಖಾತೆಗಳನ್ನು ಲಾಕ್ ಮಾಡಲಾಗಿದೆ ಎಂದು ಪಕ್ಷ ತಿಳಿಸಿದೆ.

‘ಟ್ವಿಟರ್‌ ಖಾತೆಗಳು ಲಾಕ್ ಆಗಿರುವವರ ಪಟ್ಟಿ ಮುಂದುವರಿಯುತ್ತದೆ. ಜಿತೇಂದ್ರ ಸಲ್ವಾರ್‌, ಮಾಣಿಕ್ಕಮ್‌ ಟ್ಯಾಗೊರ್ ಮತ್ತು ಇನ್ನೂ ಅನೇಕ ಮಂದಿಯ ಟ್ವಿಟರ್‌ ಲಾಕ್‌ ಆಗಿದೆ. ಮೋದಿಜಿ, ನಿಮಗೆ ಗೊತ್ತಿಲ್ಲವೇ, ನಮ್ಮ ಪಕ್ಷ ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದಲೂ ಹೋರಾಟದಲ್ಲಿ ತೊಡಗಿದೆ. ಟ್ವಿಟರ್‌ ಖಾತೆ ಲಾಕ್‌ ಮಾಡಿದ ಕೂಡಲೇ, ನಮ್ಮ ಹೋರಾಟ ನಿಲ್ಲುತ್ತದೆ ಎಂದು ಭಾವಿಸಲಾಗುತ್ತಿದೆ. ಅದು ಸಾಧ್ಯವಿಲ್ಲ‘ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆಯ ಹಿನ್ನೆಲೆ:ಕಳೆದ ವಾರ ದೆಹಲಿಯಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರು ಸಂತ್ರಸ್ತೆಯ ಕುಟುಂಬದವರ ಛಾಯಾಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

‘ಕುಟುಂಬದವರ ಫೋಟೊ ಹಂಚಿಕೊಳ್ಳುವ ಮೂಲಕ, ಸಂತ್ರಸ್ತೆ ಗುರುತು ಬಹಿರಂಗಗೊಳಿಸಿದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿತ್ತು.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ರಾಹುಲ್‌ ಗಾಂಧಿಯವರ ಟ್ವೀಟ್ ಅನ್ನು ಪರಿಗಣಿಸಿ, ಸಂತ್ರಸ್ತೆಯ ಗುರುತನ್ನು ಬಹಿರಂಗಗೊಳಿಸಿ, ಕಾನೂನು ಉಲ್ಲಂಘಿಸಿದ್ದಕ್ಕಾಗಿ, ಕಾಂಗ್ರೆಸ್ ನಾಯಕನ ಟ್ವಿಟರ್‌ ಖಾತೆಯನ್ನು ಅಮಾನತುಗೊಳಿಸುವಂತೆ ಟ್ವಿಟರ್‌ ಸಾಮಾಜಿಕ ಜಾಲತಾಣಕ್ಕೆ ನಿರ್ದೇಶನ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.