ಚಿಮೂರ್ (ಮಹಾರಾಷ್ಟ್ರ): ‘ದೇಶವನ್ನು ಆಳಲು ನಾವು ಹುಟ್ಟಿದ್ದೇವೆ ಎಂಬುದು ಕಾಂಗ್ರೆಸ್‌ನ ‘ಶಾಹಿ ಪರಿವಾರ’ದ (ರಾಜ ಕುಟುಂಬ) ಮನಸ್ಥಿತಿ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ‘ಕೈ’ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಚಿಮೂರ್‌ನಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಇದೇ ಕಾರಣದಿಂದ ಕಾಂಗ್ರೆಸ್ ಪಕ್ಷವು ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳು ಪ್ರಗತಿ ಸಾಧಿಸಲು ಅವಕಾಶ ನೀಡಲಿಲ್ಲ’ ಎಂದು ಟೀಕಿಸಿದರು.
‘ಮೀಸಲಾತಿಯ ವಿಚಾರ ಬಂದಾಗ ಕಾಂಗ್ರೆಸ್ ಸಿಟ್ಟಿಗೇಳುತ್ತದೆ. 1980ರಲ್ಲಿ, ರಾಜೀವ್ ಗಾಂಧಿ ಅವರು ಕಾಂಗ್ರೆಸ್‌ನ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ಪಕ್ಷವು ಜಾಹೀರಾತೊಂದನ್ನು ಪ್ರಕಟಿಸಿತ್ತು. ದಲಿತರು, ಹಿಂದುಳಿದ ವರ್ಗಗಳು ಮತ್ತು ಆದಿವಾಸಿಗಳು ಅನುಭವಿಸುತ್ತಿರುವ ವಿಶೇಷ ಹಕ್ಕುಗಳ ಬಗ್ಗೆ ಆ ಜಾಹೀರಾತಿನಲ್ಲಿ ಪ್ರಶ್ನೆಗಳನ್ನು ಎತ್ತಲಾಗಿತ್ತು. ಆ ಜಾಹೀರಾತಿನ ಚಿತ್ರ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ಆ ಪಕ್ಷದ ಮೀಸಲಾತಿ ವಿರೋಧಿ ಧೋರಣೆಯನ್ನು ತೋರಿಸುತ್ತದೆ’ ಎಂದು ಹೇಳಿದರು.
‘ನಿಮ್ಮ ಒಗ್ಗಟ್ಟನ್ನು ಮುರಿಯುವ ಅಪಾಯಕಾರಿ ಆಟವನ್ನು ಕಾಂಗ್ರೆಸ್ ಆಡುತ್ತಿದೆ. ಬುಡಕಟ್ಟು ಸಮುದಾಯವು ಜಾತಿಗಳಾಗಿ ವಿಭಜನೆಗೊಂಡರೆ, ಅದರ ಅಸ್ಮಿತೆ ಮತ್ತು ಶಕ್ತಿ ಕಳೆದುಹೋಗುತ್ತದೆ’ ಎಂದು ಎಚ್ಚರಿಸಿದರು.
‘ನಾವು ಒಗ್ಗಟ್ಟಿನಿಂದ ಇದ್ದರೆ ಸುರಕ್ಷಿತವಾಗಿರುತ್ತೇವೆ. ಜತೆಯಾಗಿ ಉಳಿಯದಿದ್ದರೆ ಕಾಂಗ್ರೆಸ್ ಪಕ್ಷವು ನಿಮ್ಮ ಮೀಸಲಾತಿಯನ್ನು ಕಸಿದುಕೊಳ್ಳುತ್ತದೆ’ ಎಂದರು.
ವಿರೋಧ ಪಕ್ಷಗಳ ಮಹಾ ವಿಕಾಸ ಆಘಾಡಿಯನ್ನು (ಎಂವಿಎ) ‘ಭ್ರಷ್ಟರ ಕೂಟ’ ಎಂದು ದೂರಿದ ಪ್ರಧಾನಿ, ‘ಎಂವಿಎಯು ಮಹಾರಾಷ್ಟ್ರದ ಪ್ರಗತಿಗೆ ತಡೆಯಾಗಿ ಪರಿಣಮಿಸಿದೆ’ ಎಂದು ಹೇಳಿದರು.
‘ಕರ್ನಾಟಕ: ದಿನಕ್ಕೊಂದು ಹಗರಣ’
ಪುಣೆ: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೇರಿದ ಪಕ್ಷವು ಈಗ ಜನರನ್ನು ಲೂಟಿ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಚುನಾವಣೆ ಸಮಯದಲ್ಲಿ ಮತದಾರರನ್ನು ಸೆಳೆಯಲು ಪಕ್ಷವು ಹಲವು ಭರವಸೆಗಳನ್ನು ನೀಡಿತು. ಆದರೆ ಅಧಿಕಾರಕ್ಕೆ ಬಂದ ಬಳಿಕ ಅವರಿಗೆ ಆ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಬದಲಾಗಿ, ಜನರ ಹಣ ಕೊಳ್ಳೆ ಹೊಡೆಯುತ್ತಿದೆ’ ಎಂದು ಪುಣೆಯಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಟೀಕಿಸಿದರು.
‘ಕರ್ನಾಟಕದಲ್ಲಿ ದಿನಕ್ಕೊಂದು ಹಗರಣ ಬಯಲಾಗುತ್ತಿದೆ. ಕಾಂಗ್ರೆಸ್ ಪಕ್ಷವು ಅಲ್ಲಿನ ಜನರಿಂದ ಲೂಟಿ ಮಾಡಿದ ಹಣವನ್ನು ಮಹಾರಾಷ್ಟ್ರದಲ್ಲಿ ಚುನಾವಣೆ ಎದುರಿಸಲು ಬಳಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನಾವು ಮಹಾರಾಷ್ಟ್ರವನ್ನು ಉಳಿಸಬೇಕಾದರೆ, ಕಾಂಗ್ರೆಸ್ ಅನ್ನು ದೂರವಿಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.