ADVERTISEMENT

ಕಾಂಗ್ರೆಸ್‌ ‘ರಾಜಕುಮಾರ’ನಿಂದ ಮೀಸಲಾತಿ ರದ್ದತಿಗೆ ಪಿತೂರಿ: ಮೋದಿ

ಪರೋಕ್ಷವಾಗಿ ರಾಹುಲ್ ಗಾಂಧಿ ಉಲ್ಲೇಖಿಸಿ ಪ್ರಧಾನಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 23:30 IST
Last Updated 13 ನವೆಂಬರ್ 2024, 23:30 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಸರಥ್‌ (ಜಾರ್ಖಂಡ್‌): ‘ಕಾಂಗ್ರೆಸ್‌ನ ‘ರಾಜಕುಮಾರ’ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರದ್ದು ಮಾಡುವ ಪಿತೂರಿ ನಡೆಸುತ್ತಿದ್ದಾರೆ’ ಎಂದು  ಪ್ರಧಾನಿ ನರೇಂದ್ರ ಮೋದಿ ಅವರು, ರಾಹುಲ್‌ ಗಾಂಧಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಬುಧವಾರ ಆರೋಪಿಸಿದರು.

ದೇವಧರ್‌ನಲ್ಲಿ ಬಿಜೆಪಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಇದು ಆಳವಾಗಿ ಬೇರೂರಿರುವ ಪಿತೂರಿ. ಇದು ಜಾರ್ಖಂಡ್‌ನ ಅಸ್ಮಿತೆಯನ್ನೇ ಬದಲಾಯಿಸಲಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಅಪಾಯಕಾರಿ ಉದ್ದೇಶವನ್ನು ಹೊಂದಿದೆ. ‘ರಾಜಕುಮಾರ’ ಅವರ ತಂದೆ (ರಾಜೀವ್‌ ಗಾಂಧಿ) ಮೀಸಲಾತಿಯನ್ನು ಗುಲಾಮಗಿರಿ ಎಂದು ಘೋಷಿಸಿದ್ದರು. ಮೀಸಲಾತಿಯನ್ನು ತೆಗೆದುಹಾಕುವ ಜಾಹೀರಾತು ನೀಡಿದ್ದರು. ಬಳಿಕ ಅವರ ಪಕ್ಷ ಚುನಾವಣೆಯಲ್ಲಿ ಪರಾಭವಗೊಂಡಿತು. ಎಸ್‌ಸಿ,ಎಸ್ಟಿ, ಒಬಿಸಿ ಸಮುದಾಯವನ್ನು ದುರ್ಬಲಗೊಳಿಸುವ ಇಂಥ ಪ್ರಯತ್ನವನ್ನು ನಾವು ವಿಫಲಗೊಳಿಸುತ್ತೇವೆ’ ಎಂದು ಹೇಳಿದರು.

ADVERTISEMENT

ಆಡಳಿತಾರೂಢ ಜೆಎಂಎಂ ಮೈತ್ರಿಯು ಒಳನುಸುಳುಕೋರರಿಗೆ ಪೌರತ್ವ ನೀಡಲು ನೆರವು ನೀಡುತ್ತಿದೆ. ಈ ಮೂಲಕ ಜಾರ್ಖಂಡ್ ರಾಜ್ಯದ ಹೆಣ್ಣುಮಕ್ಕಳು, ಭೂಮಿ ಮತ್ತು ಆಹಾರ ಭದ್ರತೆ ಜೊತೆ ಆಟವಾಡುತ್ತಿದೆ ಎಂದು ದೂರಿದರು. 

ಇದೇ ಸಂದರ್ಭದಲ್ಲಿ, ಬಿಜೆಪಿ ನೇತೃತ್ವದ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.