ತಿರುವನಂತಪುರ : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಚಾರದಲ್ಲಿ ಕಾಂಗ್ರೆಸ್ ಮೌನ ವಹಿಸಿದ್ದು, ಸಂಘಪರಿವಾರ ಮತ್ತು ಬಿಜೆಪಿಯ ಮನಃಸ್ಥಿತಿಯನ್ನೇ ಪ್ರದರ್ಶಿಸುತ್ತಿದೆ ಎಂದು ಕೇರಳದ ಆಡಳಿತರೂಢ ಸಿಪಿಎಂ ಗುರುವಾರ ಮತ್ತೊಮ್ಮೆ ವಾಗ್ದಾಳಿ ನಡೆಸಿದೆ.
ಸಿಪಿಎಂ ಅಭ್ಯರ್ಥಿ ವಿ. ಜಾಯ್ ಸ್ಪರ್ಧಿಸುತ್ತಿರುವ ಅಟ್ಟಿಂಗಲ್‌ನಲ್ಲಿ ನಡೆದ ಎಲ್‌ಡಿಎಫ್ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಸಿಪಿಎಂ ಹಿರಿಯ ನಾಯಕ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಎಎ ಬಗ್ಗೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಮೌನವಾಗಿದ್ದಾರೆ ಎಂದು ತಮ್ಮ ಆರೋಪಗಳನ್ನು ಪುನರುಚ್ಚರಿಸಿದರು.
‘ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಿಎಎ ಬಗ್ಗೆ ಏನನ್ನೂ ಹೇಳಿಲ್ಲ. ಅಮೆರಿಕ ಸೇರಿದಂತೆ ಹಲವು ದೇಶಗಳು ಸಿಎಎ ವಿರೋಧಿಸಿವೆ ಮತ್ತು ಟೀಕೆ ಕೂಡ ಮಾಡಿವೆ. ಆದರೆ, ಕಾಂಗ್ರೆಸ್‌ಗೆ ಅಂತಹ ನಿಲುವು ತೆಗೆದುಕೊಳ್ಳಲು ಅಥವಾ ಬಿಜೆಪಿ, ಸಂಘ ಪರಿವಾರದ ಕಾರ್ಯಸೂಚಿಯನ್ನು ವಿರೋಧಿಸಲು ಸಾಧ್ಯವಾಗುತ್ತಿಲ್ಲ’ ಎಂದು ವಿಜಯನ್ ಟೀಕಿಸಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸಿಪಿಎಂ ನಾಯಕ ಥಾಮಸ್ ಐಸಾಕ್ ಅವರ ಉದಾಹರಣೆ ನೀಡಿ, ಜಾರಿ ನಿರ್ದೇಶನಾಲಯ (ಇ.ಡಿ), ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರ ಇನ್ನಿತರ ತನಿಖಾ ಏಜೆನ್ಸಿಗಳು ತಮ್ಮದೇ ನಾಯಕರ ವಿರುದ್ಧ ಕ್ರಮ ತೆಗೆದುಕೊಂಡಾಗ ಕಾಂಗ್ರೆಸ್ ವಿರೋಧಿಸುತ್ತದೆ. ಆದರೆ, ಬೇರೆ ಪಕ್ಷಗಳ ನಾಯಕರ ಮೇಲೆ ಅವು ಕ್ರಮ ತೆಗೆದುಕೊಂಡರೆ ಅದು ಮೌನವಾಗಿರುತ್ತದೆ ಎಂದು ಕಿಡಿಕಾರಿದರು.
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಕಾಂಗ್ರೆಸ್, ಕೇಜ್ರಿವಾಲ್ ವಿರುದ್ಧ ದೂರು ದಾಖಲಿಸಿದ್ದರಿಂದ ಇ.ಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಯಿತು ಎಂದೂ ವಿಜಯನ್ ಆರೋಪಿಸಿದರು.
ಕೆಐಐಎಫ್‌ಬಿ ಮಸಾಲಾ ಬಾಂಡ್ ಪ್ರಕರಣದ ತನಿಖೆಗೆ ಸಂಬಂಧಿಸಿ ಐಸಾಕ್ ಅವರನ್ನು ಇ.ಡಿ ಏಕೆ ಬಂಧಿಸುತ್ತಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ ಎಂದು ಅವರು ಕಿಡಿಕಾರಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಆರಿಸಿ ಕಳುಹಿಸಿದ್ದ ಯುಡಿಎಫ್ ಸಂಸದರು ಸಂಸತ್ತಿನಲ್ಲಿ ಯಾವುದೇ ವಿಷಯದ ಬಗ್ಗೆಯೂ ದನಿ ಎತ್ತದಿರುವುದಕ್ಕೆ ಮತದಾರರು ಭ್ರಮನಿರಸನಗೊಂಡಿದ್ದಾರೆ–ಪಿಣರಾಯಿ ವಿಜಯನ್ ಕೇರಳ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.