ADVERTISEMENT

ರೈತರನ್ನು 'ಅನರ್ಹ'ಗೊಳಿಸಿ ದುಡ್ಡು ವಾಪಸ್‌ ಕೇಳುತ್ತಿರುವ ಕೇಂದ್ರ: ಕಾಂಗ್ರೆಸ್‌

ಪಿಟಿಐ
Published 1 ಸೆಪ್ಟೆಂಬರ್ 2022, 10:34 IST
Last Updated 1 ಸೆಪ್ಟೆಂಬರ್ 2022, 10:34 IST
ಪ್ರಧಾನಿ ನರೇಂದ್ರ ಮೋದಿ | ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ | ಪಿಟಿಐ ಚಿತ್ರ   

ನವದೆಹಲಿ: ಪಿಎಂ-ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಸಹಾಯ ಧನ ಸ್ವೀಕರಿಸುತ್ತಿರುವ ಫಲಾನುಭವಿ ರೈತರಿಗೆ ಅನರ್ಹರೆಂದು ಪರಿಗಣಿಸಿ ನೋಟಿಸ್‌ ಕೊಡಲಾಗುತ್ತಿದೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ. ಈಗಾಗಲೇ ಕೊಟ್ಟಿರುವ ದುಡ್ಡನ್ನು ವಾಪಸ್‌ ಮಾಡುವಂತೆ ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದೆ.

ಬಡ ಅನ್ನದಾತರಿಂದ ಪಿಎಂ-ಕಿಸಾನ್‌ ಯೋಜನೆಯಡಿ ಬಿಡುಗಡೆಯಾದ ದುಡ್ಡನ್ನು ವಾಪಸ್‌ ಪಡೆಯುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ರಾಷ್ಟ್ರದಾದ್ಯಂತ ಸುಮಾರು ಎರಡು ಕೋಟಿ ರೈತರನ್ನು ಕೇಂದ್ರ ಸರ್ಕಾರ ಅನರ್ಹರು ಎಂದು ಪರಿಗಣಿಸಿದೆ ಎಂದು ಆರೋಪಿಸಿದೆ.

'ತಮ್ಮ ಉದ್ಯಮಿ ಸ್ನೇಹಿತರ ಕೋಟ್ಯಂತರ ರೂಪಾಯಿ ಸಾಲವನ್ನು ಮನ್ನಾ ಮಾಡುತ್ತಿದೆ. ಆದರೆ ರೈತರಿಂದ ಹಣ ವಾಪಸ್‌ ಕೇಳುತ್ತಿದೆ' ಎಂದು ಗೌತಮ್‌ ಅದಾನಿ, ಮುಕೇಶ್‌ ಅಂಬಾನಿ ಅವರ ಹೆಸರನ್ನು ಹೇಳದೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ADVERTISEMENT

ಎಐಸಿಸಿ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಅಖಿಲೇಶ್‌ ಪ್ರತಾಪ್‌ ಸಿಂಗ್‌ ಅವರು, 'ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ರೈತರನ್ನು ಅನರ್ಹರೆಂದು ಪರಿಗಣಿಸಲಾಗುತ್ತಿದೆ. ಕೊಟ್ಟ ಹಣವನ್ನು ಕೇಂದ್ರ ಸರ್ಕಾರವು ರೈತರಿಂದ ವಾಪಸ್‌ ಪಡೆಯುತ್ತಿದೆ' ಎಂದು ಆರೋಪಿಸಿದರು.

'ಕಿಸಾನ್‌ ಸಮ್ಮಾನ್‌ ನಿಧಿಯು ಈಗ ಕಿಸಾನ್‌ ಅಪಮಾನ್‌ ನಿಧಿಯಾಗಿ ಬದಲಾಗಿದೆ. (ರೈತರನ್ನು ಅಪಮಾನಿಸುವ ಯೋಜನೆ) ಕೇಂದ್ರ ಸರ್ಕಾರವು ತನ್ನ ಉದ್ಯಮ ಸ್ನೇಹಿತರ ಕೋಟ್ಯಂತರ ರೂಪಾಯಿ ಮೌಲ್ಯದ ಸಾಲವನ್ನು ಮನ್ನಾ ಮಾಡುತ್ತದೆ. ಆದರೆ ರಾಷ್ಟ್ರದ ಬಡ ರೈತರಿಂದ ಕೊಟ್ಟ ಸಹಾಯಧನವನ್ನು ವಾಪಸ್‌ ಕೇಳುತ್ತಿದೆ ಎಂದು ಪ್ರತಾಪ್‌ ಸಿಂಗ್‌ ವಾಗ್ದಾಳಿ ನಡೆಸಿದರು.

'2019ರಲ್ಲಿ ಲೋಕಸಭೆ ಚುನಾವಣೆ ನಡೆಯುವ ಮೊದಲು ಮೋದಿ ಸರ್ಕಾರವು ಪಿಎಂ-ಕಿಸಾನ್‌ ಸಮ್ಮಾನ್‌ ನಿಧಿಯನ್ನು ಆರಂಭಿಸಿತು. ರೈತರ ಬ್ಯಾಂಕ್‌ ಖಾತೆಯ ಸಂಖ್ಯೆಯನ್ನು ಲಜ್ಜೆಗೆಟ್ಟು ಪಡೆದುಕೊಂಡಿತು. ಹಾಗಾಗಿ ಚುನಾವಣೆಗೂ ಮೊದಲೇ ಸಹಾಯಧನವು ಅವರ ಕೈಸೇರಿತು. ಇದೀಗ ಪಿಎಂ-ಕಿಸಾನ್‌ ಯೋಜನೆಯಡಿ ರೈತರನ್ನು ಅನರ್ಹರೆಂದು ಪರಿಗಣಿಸಿ, ಅವರಿಂದ ಹಣವನ್ನು ವಾಪಸ್‌ ಮಾಡುವಂತೆ ಕೇಂದ್ರ ಸರ್ಕಾರ ಕೇಳುತ್ತಿದೆ. ರೈತರಿಗೆ ನೋಟಿಸ್‌ ನೀಡಲಾಗುತ್ತಿದೆ. ಸುಮಾರು ಎರಡು ಕೋಟಿ ರೈತರನ್ನು ಅನರ್ಹರೆಂದು ಪರಿಗಣಿಸಲಾಗಿದೆ. ರೈತರಿಂದ ಹಣವನ್ನು ವಾಪಸ್‌ ಪಡೆಯುವ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು' ಎಂದು ಪ್ರತಾಪ್‌ ಸಿಂಗ್‌ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.