ADVERTISEMENT

ನೋಟು ರದ್ದತಿ ಮಾಹಿತಿ ನೀಡದ ಕೇಂದ್ರದಿಂದ 'ಶ್ವೇತ ಸುಳ್ಳು ಪತ್ರ': ಕಾಂಗ್ರೆಸ್ ಕಿಡಿ

ಪಿಟಿಐ
Published 9 ಫೆಬ್ರುವರಿ 2024, 10:53 IST
Last Updated 9 ಫೆಬ್ರುವರಿ 2024, 10:53 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಶ್ವೇತಪತ್ರವನ್ನು 'ಶ್ವೇತ ಸುಳ್ಳು ಪತ್ರ' ಎಂದು ಕರೆದಿರುವ ಕಾಂಗ್ರೆಸ್‌, ನಿರುದ್ಯೋಗ, ನೋಟು ರದ್ದತಿ, ಗಡಿ ಬಿಕ್ಕಟ್ಟು ಮತ್ತು ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ಮಾಹಿತಿ ಇದರಲ್ಲಿ ಇರಬೇಕಿತ್ತು ಎಂದು ಪ್ರತಿಪಾದಿಸಿದೆ.

ADVERTISEMENT

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 54 ಪುಟಗಳ ಶ್ವೇತಪತ್ರವನ್ನು ಸಂಸತ್ತಿನಲ್ಲಿ ಗುರುವಾರ ಮಂಡಿಸಿದ್ದರು. ಅದರಲ್ಲಿ, 2014ರಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗುವುದಕ್ಕೂ ಮುನ್ನ ಇದ್ದ ಯುಪಿಎ ಆಡಳಿತವು ದೇಶದ ಅರ್ಥವ್ಯವಸ್ಥೆಯನ್ನು ಹಾಳುಗೆಡವಿತ್ತು ಎಂದು ಆರೋಪಿಸಿದ್ದರು.

ಈ ಆರೋಪ ಕುರಿತು ಸಂಸತ್ತಿನ ಹೊರಗೆ ಶುಕ್ರವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, 'ಇದು ಶ್ವೇತಪತ್ರವಲ್ಲ. ಶ್ವೇತ ಸುಳ್ಳು ಪತ್ರ. ನಮ್ಮ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಹತ್ತು ವರ್ಷಗಳ ಎನ್‌ಡಿಎ ಆಡಳಿತದ 'ಅನ್ಯಾಯ ಕಾಲದ' ಕುರಿತು 'ಕಪ್ಪು ಪತ್ರ' ಬಿಡುಗಡೆ ಮಾಡಿದ್ದಾರೆ. ಶ್ವೇತಪತ್ರದ ಪ್ರಶ್ನೆಗಳಿಗೆ ಕಪ್ಪು ಪತ್ರದಲ್ಲಿ ಉತ್ತರಗಳಿವೆ. ಕಪ್ಪು ಪತ್ರವು ಶ್ವೇತಪತ್ರದ ಮೇಲಿನ ನಿರ್ದಿಷ್ಟ ದಾಳಿಯಾಗಿದೆ' ಎಂದಿದ್ದಾರೆ.

'ಶ್ವೇತಪತ್ರದಲ್ಲಿ ನೋಟು ರದ್ದತಿ, ನಿರುದ್ಯೋಗ, ಹಣದುಬ್ಬರ, ಚೀನಾ ಗಡಿಯಲ್ಲಿನ ಪರಿಸ್ಥಿತಿ, ಗಡಿ ಬಿಕ್ಕಟ್ಟು ಮತ್ತು ಏರುತ್ತಿರುವ ಆರ್ಥಿಕ ಅಸಮಾನತೆಯ ಬಗ್ಗೆ ಉಲ್ಲೇಖವಿಲ್ಲ. ಇವೆಲ್ಲವೂ ಶ್ವೇತಪತ್ರದಲ್ಲಿ ಉಲ್ಲೇಖವಾಗಬೇಕಿತ್ತು ಎಂಬುದು ನಮ್ಮ ಬೇಡಿಕೆಯಾಗಿದೆ. ಆದರೆ, ಈ ವಿಚಾರದಲ್ಲಿ ಕೇಂದ್ರ ಮೌನವಾಗಿದೆ' ಎಂದು ಕಿಡಿಕಾರಿದ್ದಾರೆ.

ಮಣಿಪುರ ಹಿಂಸಾಚಾರದ ಕುರಿತು ಶ್ವೇತಪತ್ರ ಹೊರಡಿಸುವುಂತೆ ನಾವು ಬೇಡಿಕೆ ಇಟ್ಟಿದ್ದೆವು. ಕೇಂದ್ರ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಕುಟುಕಿದ್ದಾರೆ.

'ನೋಟು ರದ್ದತಿ ಕುರಿತು ಶ್ವೇತಪತ್ರ ಪ್ರಕಟಿಸುವುಂತೆ ಈ ಹಿಂದೆ ಒತ್ತಾಯಿಸಿದ್ದೆವು. ಆ ವಿಚಾರದಲ್ಲೂ ಸರ್ಕಾರ ಮೌನವಾಗಿತ್ತು. ದೇಶದಲ್ಲಿ ನಿರುದ್ಯೋಗ ಪ್ರಮಾಣವು 45 ವರ್ಷಗಳ ಗರಿಷ್ಠ ಮಟ್ಟಕ್ಕೇರಿದ್ದರ ಬಗ್ಗೆಯೂ ಶ್ವೇತಪತ್ರವಿಲ್ಲ. ಸದ್ಯ ಬಿಡುಗಡೆ ಮಾಡಿರುವ ಶ್ವೇತಪ್ರತವು ಮತ್ತೊಂದು ಘಟನಾವಳಿಯಾಗಿದೆ ಅಷ್ಟೇ. ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರೇ ಹೇಳಿರುವಂತೆ ಪ್ರಧಾನಿ ನರೇಂದ್ರ ಮೋದಿ, ಕಾರ್ಯಕ್ರಮ ಆಯೋಜಕನಾಗಿದ್ದಾರೆ' ಎಂದು ಚಾಟಿ ಬೀಸಿದ್ದಾರೆ.

ಭ್ರಷ್ಟಾಚಾರ ಹಾಗೂ ನೈಜ ಸಮಸ್ಯೆಗಳಾದ ರೈತರು, ಯುವಕರು ಮತ್ತು ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಬಾಯಿ ಬಿಡುವುದಿಲ್ಲ ಎಂದು ಗುಡುಗಿರುವ ರಮೇಶ್‌, ಪ್ರಧಾನಿಯವರು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ತಮ್ಮ ಒಬ್ಬಿಬ್ಬರು ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಾಗೆಯೇ, ಬಂದರುಗಳು, ವಿಮಾನ ನಿಲ್ದಾಣಗಳು, ಕೈಗಾರಿಕೆಗಳು, ತೈಲ ಸಂಸ್ಕರಣಾ ಘಟಕಗಳನ್ನೂ ಖಾಸಗೀಕರಣಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುಪಿಎ ಆಡಳಿತದ ಆರ್ಥಿಕ ಸ್ಥಿತಿ ಮೇಲೆ ಕೇಂದ್ರ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಿರುವುದು ಕಟುವಾಸ್ತವವನ್ನು ಮರೆಮಾಚುವ ಉದ್ದೇಶವನ್ನು ಹೊಂದಿದೆ. ಮೋದಿ ಸರ್ಕಾರದ ಅವಧಿಯಲ್ಲಿ ದೇಶದ ಬಹುಜನರು ಹಸಿವು, ಬಡತನ, ಬೆಲೆ ಏರಿಕೆ, ನಿರುದ್ಯೋಗದಿಂದ ಕಂಗೆಟ್ಟಿದ್ದಾರೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.