ನವದೆಹಲಿ: ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿಗಳ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ‘ಆಕ್ಷೇಪಾರ್ಹ’ ಪೋಸ್ಟ್ ಮಾಡಲಾಗಿದ್ದು, ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿ ಮನೀಶ್ ವರ್ಮಾ ಅವರ ಅಧಿಕೃತ ‘ಎಕ್ಸ್’ ಖಾತೆಯಿಂದ ‘ಆಕ್ಷೇಪಾರ್ಹ’ ಪೋಸ್ಟ್ ಮಾಡಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಜಿಲ್ಲಾಧಿಕಾರಿಗಳ ‘ಎಕ್ಸ್’ ಖಾತೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕನ ಕುರಿತು ಅನುಚಿತ ಮತ್ತು ಸ್ವೀಕಾರಾರ್ಹವಲ್ಲದ ಕಾಮೆಂಟ್ ಅನ್ನು ಪೋಸ್ಟ್ ಮಾಡಲಾಗಿದೆ. ಇದು ಹೊಸ ಬೆಳವಣಿಗೆಯಲ್ಲ. ಕಳೆದ 10 ವರ್ಷಗಳಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ದಾರ್ ಪಟೇಲ್ ಅವರು ಒಂದು ಕಾಲದಲ್ಲಿ ಭಾರತದ ಉಕ್ಕಿನ ಚೌಕಟ್ಟು ಎಂದು ಕರೆದಿದ್ದ ನಾಗರಿಕ ಸೇವೆಯನ್ನು ನಿಗ್ರಹಿಸಲು ಮತ್ತು ನಿಷ್ಪ್ರಯೋಜಕಗೊಳಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ರಾಹುಲ್ ಕುರಿತಾದ ‘ಆಕ್ಷೇಪಾರ್ಹ’ ಪೋಸ್ಟ್ ಸಾಕ್ಷಿಯಾಗಿದೆ. ನಿಯಮಗಳನ್ನು ಉಲ್ಲಂಘಿಸಿರುವ ಅಧಿಕಾರಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಆಗ್ರಹಿಸಿದ್ದಾರೆ.
ಏನಿದು ಪ್ರಕರಣ: ಈಚೆಗೆ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರು ಇತಿಹಾಸಕಾರರೊಂದಿಗಿನ ತಮ್ಮ ಸಂಭಾಷಣೆಯ ಕ್ಲಿಪ್ ಅನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು. ‘ಈಗಾಗಲೇ ಇತಿಹಾಸವನ್ನು ನಿರ್ಮಿಸಲಾಗಿದೆ. ಅದನ್ನು ಬದಲಾಯಿಸಲಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಇತಿಹಾಸ ಹೇಗೆ ನೆನಪಿಸಿಕೊಳ್ಳುತ್ತದೆ ಎಂಬುದು ಅವರಿಗೆ ಗೊತ್ತಿದೆ. ಅದಕ್ಕಾಗಿಯೇ ಅವರು ಚಿಂತಿತರಾಗಿದ್ದಾರೆ’ ಎಂದು ಹೇಳಿಕೊಂಡಿದ್ದರು.
ಈ ಪೋಸ್ಟ್‌ಗೆ ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿ ಮನೀಶ್ ವರ್ಮಾ ಅವರ ಅಧಿಕೃತ ‘ಎಕ್ಸ್’ ಖಾತೆಯಿಂದ ಪ್ರತಿಯಿಸಿದ್ದು, ‘ನೀವು ನಿಮ್ಮ ಬಗ್ಗೆ ಮತ್ತು ನಿಮ್ಮ ‘ಪಪ್ಪು’ ಬಗ್ಗೆ ಮಾತ್ರ ಯೋಚಿಸಬೇಕು’ ಎಂದು ಬರೆಯಲಾಗಿತ್ತು. ನಂತರ ಈ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿತ್ತು.
ಡಿಲೀಟ್ ಮಾಡಲಾದ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಸುಪ್ರಿಯಾ ಶ್ರೀನೇತ್, ‘ನೋಯ್ಡಾದ ಜಿಲ್ಲಾಧಿಕಾರಿ ಅವರು ಇಡೀ ಜಿಲ್ಲೆಗೆ ಜವಾಬ್ದಾರರು. ಅವರ ಭಾಷೆ ಮತ್ತು ದೇಶದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಗೆಗಿನ ಆಲೋಚನೆಗಳನ್ನು ನೋಡಿದರೇ... ಆಡಳಿತಾತ್ಮಕ ಸಿಬ್ಬಂದಿ ಸಂಘಿಗಳಿಂದ ತುಂಬಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈಗ ಅವರೆಲ್ಲ ಸಾಂವಿಧಾನಿಕ ಹುದ್ದೆಗಳಲ್ಲಿ ಕುಳಿತು ದ್ವೇಷವನ್ನು ಹರಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕ ಪವನ್ ಖೇರಾ ಪ್ರತಿಕ್ರಿಯಿಸಿದ್ದು, ‘ಬಿಜೆಪಿ ಆಡಳಿತದಲ್ಲಿ ಈಗ ಐಎಎಸ್ ಅಧಿಕಾರಿಗಳಿಗೆ ಇಂತಹ ರಾಜಕೀಯ ಹೇಳಿಕೆಗಳನ್ನು ನೀಡಲು ಆದೇಶಿಸಲಾಗಿದೆಯೇ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.