ADVERTISEMENT

ವಿಶ್ವಸಂಸ್ಥೆ ಅರ್ಜಿಯಲ್ಲಿ ರಾಹುಲ್ ಗಾಂಧಿ ಹೆಸರು ಬಳಸಿದ ಪಾಕ್: ಕಾಂಗ್ರೆಸ್ ಕಿಡಿ

ಪಿಟಿಐ
Published 28 ಆಗಸ್ಟ್ 2019, 9:44 IST
Last Updated 28 ಆಗಸ್ಟ್ 2019, 9:44 IST
   

ನವದೆಹಲಿ:ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿ ಸುಳ್ಳು ಮತ್ತು ತಪ್ಪು ಮಾಹಿತಿ ಸಮರ್ಥಿಸಿಕೊಳ್ಳಲು ಪಾಕಿಸ್ತಾನವು ವಿಶ್ವಸಂಸ್ಥೆಗೆ ಸಲ್ಲಿಸಿರುವ ಅರ್ಜಿಯಲ್ಲಿ ರಾಹುಲ್ ಗಾಂಧಿಹೆಸರು ಬಳಸಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಜಮ್ಮು–ಕಾಶ್ಮೀರ ಮತ್ತು ಲಡಾಕ್ ಈವರೆಗೆ, ಮುಂದೆಂದಿಗೂ ಭಾರತದ ಅವಿಭಾಜ್ಯ ಅಂಗಗಳಾಗಿಯೇ ಇರಲಿವೆ ಎಂದು ಪಕ್ಷವು ಪ್ರಕಟಣೆಯಲ್ಲಿ ತಿಳಿಸಿದೆ.

‘ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿ ತಾನು ಹರಡಿರುವ ಸುಳ್ಳುಗಳನ್ನು ಮತ್ತು ತಪ್ಪು ಮಾಹಿತಿಗಳನ್ನು ಸಮರ್ಥಿಸಿಕೊಳ್ಳಲು,ಪಾಕಿಸ್ತಾನ ಸರ್ಕಾರವು ವಿಶ್ವಸಂಸ್ಥೆಗೆ ಸಲ್ಲಿಸಿರುವ ಅರ್ಜಿಯಲ್ಲಿ ರಾಹುಲ್ ಗಾಂಧಿಯವರ ಹೆಸರು ಬಳಸಿರುವ ಬಗ್ಗೆ ವರದಿಗಳಿಂದ ತಿಳಿದುಬಂದಿದೆ. ಜಮ್ಮು–ಕಾಶ್ಮೀರ, ಲಡಾಕ್ ಎಂದಿಗೂ ಭಾರತದ ಅವಿಭಾಜ್ಯ ಅಂಗಗಳಾಗಿಯೇ ಇರಲಿವೆ. ಈ ಕುರಿತು ಜಗತ್ತಿನಲ್ಲಿ ಯಾರಿಗೂ ಅನುಮಾನ ಬೇಡ. ಇದನ್ನು ಪಾಕಿಸ್ತಾನದ ಯಾವುದೇ ರೀತಿಯ ವಂಚನೆಯಿಂದಲೂ ಬದಲಾಯಿಸಲಾಗದು’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ), ಗಿಲ್ಗಿಟ್, ಹುಂಜಾ, ಬಲೂಚಿಸ್ತಾನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ಪಾಕಿಸ್ತಾನವು ಜಗತ್ತಿಗೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ಅನೇಕ ವಿಷಯಗಳಲ್ಲಿ ಈ ಸರ್ಕಾರವನ್ನು (ಕೇಂದ್ರ ಸರ್ಕಾರ) ನಾನು ಒಪ್ಪುವುದಿಲ್ಲ. ಆದರೆ ಈ ವಿಚಾರದಲ್ಲಿ ನನ್ನ ನಿಲುವು ಸ್ಪಷ್ಟ: ಕಾಶ್ಮೀರವು ಭಾರತದ ಆಂತರಿಕ ವಿಷಯ. ಪಾಕಿಸ್ತಾನವೂ ಸೇರಿದಂತೆ ಇತರ ಯಾವುದೇಶ ದೇಶಕ್ಕೂ ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅವಕಾಶವಿಲ್ಲ’ ಎಂದು ಬುಧವಾರ ಬೆಳಿಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ಜತೆಗೆ,‘ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ವಿಷಯದಲ್ಲಿ ವಿಶ್ವದಾದ್ಯಂತ ಕುಖ್ಯಾತಿ ಪಡೆದಿರುವ ಪಾಕಿಸ್ತಾನವೇ ಜಮ್ಮು–ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಕುಮ್ಮಕ್ಕು ನೀಡುತ್ತಿದೆ’ ಎಂದು ಮತ್ತೊಂದದು ಟ್ವೀಟ್‌ನಲ್ಲಿ ಆರೋಪಿಸಿದ್ದರು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.