ನವದೆಹಲಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ‘ಪಕ್ಷದ ಬೂಟಾಟಿಕೆ ಹಾಗೂ ಕುಟುಂಬ ಕೇಂದ್ರಿತ ರಾಜಕಾರಣಕ್ಕೆ ಇದು ಮತ್ತೊಂದು ನಿದರ್ಶನ’ ಎಂದಿದ್ದಾರೆ.
‘ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಪರಂಪರೆ ಮುಂದುವರಿದಿದೆ! ನ್ಯಾಷನಲ್ ಹೆರಾಲ್ಡ್‌ನಿಂದ ಕರ್ನಾಟಕದ ಮುಡಾ ಹಗರಣದವರೆಗೆ, ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಇತಿಹಾಸ ಉತ್ತಮವಾಗಿ ದಾಖಲಾಗಿದೆ. ಅವರು ವೈಯಕ್ತಿಕ ಲಾಭಕ್ಕಾಗಿ ಜನರ ನಂಬಿಕೆಗೆ ಪದೇ ಪದೇ ದ್ರೋಹ ಮಾಡಿದ್ದಾರೆ’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಟೀಕಿಸಿದ್ದಾರೆ.
‘ಕಾಂಗ್ರೆಸ್ ತನ್ನನ್ನು ದಲಿತರು ಮತ್ತು ಅಲ್ಪಸಂಖ್ಯಾತರ ಕಾವಲುಗಾರ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ, ಪಕ್ಷದ ಮುಖ್ಯಮಂತ್ರಿಯೊಬ್ಬರು ದಲಿತ ಕುಟುಂಬದಿಂದ ಭೂಮಿಯನ್ನು ಕಸಿದುಕೊಂಡಿದ್ದಾರೆ. ಇದು ಕಾಂಗ್ರೆಸ್‌ನ ಬೂಟಾಟಿಕೆ’ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ:
ಹಗರಣದ ನಿಷ್ಪಕ್ಷಪಾತ ತನಿಖೆ ನಡೆಯಲು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಬಿಜೆಪಿ ಸಂಸದರಾದ ಸಂಬೀತ್ ಪಾತ್ರ ಹಾಗೂ ತೇಜಸ್ವಿ ಸೂರ್ಯ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇದು ಸಿದ್ದರಾಮಯ್ಯ ಹಾಗೂ ಅವರ ಕುಟುಂಬವನ್ನು ಒಳಗೊಂಡಿರುವ ಭ್ರಷ್ಟಾಚಾರದ ಗಂಭೀರ ಪ್ರಕರಣ’ ಎಂದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಪಾತ್ರ, ‘ಕರ್ನಾಟಕದ ಮುಖ್ಯಮಂತ್ರಿಯನ್ನು ರಕ್ಷಿಸಲು ಕಾಂಗ್ರೆಸ್ ಅಧ್ಯಕ್ಷರು ಬೆಂಗಳೂರಿಗೆ ಹೋಗಿದ್ದಾರೆ. ವೈದ್ಯೆಯ ಅತ್ಯಾಚಾರ ಹಾಗೂ ಕೊಲೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಯುತ್ತಿರುವ ಕೋಲ್ಕತ್ತಕ್ಕೆ ಅವರು ಯಾವಾಗ ಹೋಗುತ್ತಾರೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.