ತಿರುವನಂತಪುರ: ಇತ್ತೀಚೆಗಷ್ಟೇ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಅತ್ತ ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ ಸರ್ಕಾರದೊಂದಿಗೆ ಜೆಡಿಎಸ್ ಮೈತ್ರಿಯನ್ನು ಹೊಂದಿದೆ.
ಈ ಕುರಿತು ಕೇರಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ವಿ.ಡಿ. ಸತೀಶನ್, 'ಇದರಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ 'ದ್ವಂದ್ವ ನೀತಿ' ಬಯಲಾಗಿದೆ' ಎಂದು ಹೇಳಿದ್ದಾರೆ.
'ಕಮ್ಯೂನಿಸ್ಟ್ ಪಕ್ಷದ 'ಮೌನ ಸಮ್ಮತಿ'ಯಿಂದಲೇ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.
'ಕಳೆದ ಸೆಪ್ಟೆಂಬರ್‌ನಲ್ಲಿ ಎನ್‌ಡಿಎ ಒಕ್ಕೂಟಕ್ಕೆ ಜೆಡಿಎಸ್ ಸೇರ್ಪಡೆಗೊಂಡಿತ್ತು. ಆದರೆ ಅಲ್ಲಿಂದ ಬಳಿಕ ರಾಜ್ಯದಲ್ಲಿ ಈ ವಿಷಯದಲ್ಲಿ ವಿಜಯನ್ ಹಾಗೂ ಸಿಪಿಐ(ಎಂ) ಮೌನ ತಾಳಿದೆ' ಎಂದು ಅವರು ಹೇಳಿದ್ದಾರೆ.
'ಕೇರಳದಲ್ಲಿ ಎಲ್‌ಡಿಎಫ್ ಹಾಗೂ ಎನ್‌ಡಿಎ ನಡುವೆ ಒಳ ಒಪ್ಪಂದ ಇದ್ದು, ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ಜೆಡಿಎಸ್‌ಗೆ ಸಿಪಿಐ(ಎಂ) 'ರಾಜಕೀಯ ರಕ್ಷಣೆ' ನೀಡುತ್ತಿದೆ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಜತೆ ಮೈತ್ರಿಗೆ ಸಂಬಂಧಿಸಿದಂತೆ ಎಲ್‌ಡಿಎಫ್ ನಿಲುವು ಸ್ಪಷ್ಟಪಡಿಸುವಂತೆಯೂ ಸತೀಶನ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.