ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜೂನ್ 1ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಕಾಂಗ್ರೆಸ್, ಸಿಪಿಐ ಹಾಗೂ ಅರವಿಂದ ಕೇಜ್ರಿವಾಲ್ ಪತ್ನಿ ಸುನೀತಾ ಸೇರಿದಂತೆ ಹಲವಾರ ಮುಖಂಡರು ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿರುವುದು ಸಂತಸದ ವಿಚಾರ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ದುರುಪಯೋಗಡಿಸಿಕೊಂಡು ಬರುತ್ತಿರುವುದನ್ನು ನಾವು ಖಂಡಿಸುತ್ತಲೇ ಬಂದಿದ್ದೇವೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದು ಸಂತಸದ ವಿಚಾರವಾಗಿದೆ. ಇದು ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನು ಹೆಚ್ಚಿಸುತ್ತದೆ ಎಂದು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದ್ರ ಯಾದವ್ ಹೇಳಿದ್ದಾರೆ.
ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು ಎಂದು ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನಿಂದ ಬಿಜೆಪಿಯ ಸರ್ವಾಧಿಕಾರ ಹಾಗೂ ಅದರ ರಾಜಕೀಯ ಶೈಲಿಗೆ ಹಿನ್ನಡೆಯಾಗಿದೆ. ನ್ಯಾಯಾಲಯದ ಈ ತೀರ್ಪು ದೇಶದ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಿದೆ ಎಂದು ಸಿಪಿಐ ಸಂಸದ ಬಿನಾಯ್ ವಿಶ್ವಂ ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.