ನವದೆಹಲಿ: ಹಣದುಬ್ಬರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಗೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ನೀಡುವಂತೆ ಕೋರಿರುವ ಕಾಂಗ್ರೆಸ್, ಜನಸಾಮಾನ್ಯರ ಪರ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದೆ.
ರಾಜ್ಯಸಭೆಯಲ್ಲಿ ಆರಂಭವಾದ ಸಂಸತ್‌ನ ಬಜೆಟ್ ಅಧಿವೇಶನದ ದ್ವಿತೀಯಾರ್ಧದ ಮೊದಲ ದಿನವಾದ ಸೋಮವಾರ ಈ ಕುರಿತ ಚರ್ಚೆಗೆ ಅವಕಾಶ ದೊರೆಯದ್ದರಿಂದ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯಿಂದ ಜನಸಾಮಾನ್ಯರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಈ ಕುರಿತ ಚರ್ಚೆಗೆ ನಿಯಮಾನುಸಾರ ಅವಕಾಶ ಕೋರಿದರೂ ಸಭಾಪತಿಯವರು ಪರಿಗಣಿಸಲಿಲ್ಲ. ಹಾಗಾಗಿ ಮೊದಲ ದಿನದ ಕಲಾಪ ನಡೆಯಲಿಲ್ಲ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸುದ್ದಿಗಾರರಿಗೆ ತಿಳಿಸಿದರು.
‘ಜನರ ಆಕ್ರೋಶಕ್ಕೆ ಕಾರಣವಾಗಿರುವ ಬೆಲೆ ಏರಿಕೆಯ ವಿರುದ್ಧ ನಾವು ಸಂಸತ್‌ನ ಉಭಯ ಸದನಗಳಲ್ಲಿ ದನಿ ಎತ್ತಿ, ವಿಸ್ತೃತ ಚರ್ಚೆಯನ್ನು ಬಯಸಿದ್ದೇವೆ. ಆದರೆ, ಸರ್ಕಾರ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಬೇಡಿಕೆ ಈಡೇರುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಅವರು ಘೋಷಿಸಿದರು.
‘ಜನಸಾಮಾನ್ಯರಿಗೆ ನೇರವಾಗಿ ಸಂಬಂಧಿಸಿರುವ ವಿಷಯಗಳ ಕುರಿತು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸಮಯಾವಕಾಶ ಕೋರಿ ಸದನದಲ್ಲಿ ಹೋರಾಟ ಮುಂದುವರಿಸಲಿದ್ದೇವೆ. ಇತರ ಪಕ್ಷಗಳೂ ನಮ್ಮನ್ನು ಬೆಂಬಲಿಸಲಿವೆ’ ಎಂದು ಅವರು ವಿವರಿಸಿದರು.
‘ಕಳೆದ ಆರು ವರ್ಷಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದಲೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೊಕ್ಕಸಕ್ಕೆ ಬಂದಿರುವ ಅಂದಾಜು ₹ 21 ಲಕ್ಷ ಕೋಟಿ ಹಣ ಎಲ್ಲಿ ಹೋಯಿತು’ ಎಂದು ಪ್ರಶ್ನಿಸಿದ ಅವರು, ‘ಪ್ರಧಾನಿ ಮೋದಿ ಕೂಡಲೇ ಇದಕ್ಕೆ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.
ಒಂದೆಡೆ, ಶ್ರೀಮಂತ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿರುವ ಸರ್ಕಾರ, ಇನ್ನೊಂದೆಡೆ ಮಹಿಳೆಯರು, ಮಧ್ಯಮ ವರ್ಗ ಮತ್ತು ಸಾಮಾನ್ಯ ಜನತೆಗೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ನೋಟು ರದ್ದತಿಯಿಂದ ಸಮಸ್ಯೆಗೆ ಈಡಾಗಿದ್ದ ಜನತೆಗೆ ಕೊರೊನಾ ಲಾಕ್‌ಡೌನ್‌ನಿಂದಲೂ ಸಂಕಷ್ಟ ಎದುರಾಗಿದೆ. ಮೋದಿ ಸರ್ಕಾರವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತಲೂ ಅಧಿಕ ಪ್ರಮಾಣದ ತೆರಿಗೆಯನ್ನು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸುತ್ತಿದೆ ಎಂದು ಅವರು ದೂರಿದರು.
ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದಾಗ 273 ರೈತರು ಸಾವಿಗೀಡಾಗಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಂಸತ್‌ನಲ್ಲಿ ಗೌರವ ಸಲ್ಲಿಸಬೇಕು ಎಂಬುದು ಕಾಂಗ್ರೆಸ್‌ನ ಮನವಿಯಾಗಿತ್ತು. ಆದರೆ, ಇಂಥ ಮಹತ್ವದ ವಿಷಯದ ಕುರಿತ ಚರ್ಚೆಗೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವಕಾಶ ನೀಡಲಿಲ್ಲ ಎಂದು ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್ ಹೇಳಿದರು.
ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಸರ್ಕಾರ ನೀಡಿದ್ದ ಭರವಸೆ ಈಡೇರಿಲ್ಲ. ಬದಲಿಗೆ, ಕೃಷಿಗೆ ತಗಲುವ ವೆಚ್ಚ ಮೂರು ಪಟ್ಟು ಹೆಚ್ಚಿದೆ. ಈ ಸಂಬಂಧದ ಚರ್ಚೆಗೆ ಸರ್ಕಾರ ಆಸಕ್ತಿ ತಾಳುತ್ತಿಲ್ಲ ಎಂದು ಪಕ್ಷದ ಮುಖಂಡ ದೀಪೇಂದರ್ ಹೂಡಾ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.