ನವದೆಹಲಿ: 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಡೀಕರಣ ಮಾಡಲು ಆನ್‌ಲೈನ್‌ನಲ್ಲಿ ‘ದೇಶಕ್ಕಾಗಿ ದೇಣಿಗೆ ನೀಡಿ’ ಅಭಿಯಾನಕ್ಕೆ ಕಾಂಗ್ರೆಸ್ ಸೋಮವಾರ ಚಾಲನೆ ನೀಡಲಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದೇ 18ರಂದು ಅಭಿಯಾನಕ್ಕೆ ಚಾಲನೆ ನೀಡುವರು ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಮತ್ತು ಖಜಾಂಚಿ ಅಜಯ್ ಮಾಕೆನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದಕ್ಕಾಗಿ ಎರಡು ಆನ್‌ಲೈನ್ ಚಾನೆಲ್‌ಗಳನ್ನು– donateinc.in ಮತ್ತು ಕಾಂಗ್ರೆಸ್ ವೆಬ್‌ಸೈಟ್ inc.in. ಬಳಸಲಾಗುತ್ತದೆ. ಉದ್ಘಾಟನೆ ಸಮಯದಲ್ಲಿ ದೇಣಿಗೆಯ ಲಿಂಕ್ ಕೂಡ ನೇರವಾಗಿ ಲಭ್ಯವಾಗಲಿದೆ ಎಂದರು.
ಹದಿನೆಂಟು ವರ್ಷ ಮೇಲ್ಪಟ್ಟ ಭಾರತೀಯರು ಕನಿಷ್ಠ ₹138 ನೀಡಬಹುದು ಅಥವಾ ₹1380, ₹13,800.. ಹೀಗೆ ದೇಣಿಗೆ ನೀಡಬಹುದು. ಮಹಾತ್ಮಾ ಗಾಂಧಿ ಅವರ ಐತಿಹಾಸಿಕ ‘ತಿಲಕ್ ಸ್ವರಾಜ್ ಫಂಡ್’ ನಿಂದ ಸ್ಪೂರ್ತಿ ಪಡೆದು ಇದನ್ನು ಆರಂಭಿಸಲಾಗಿದೆ ಎಂದರು.
‘ಉತ್ತಮ ಭಾರತಕ್ಕೆ ದೇಣಿಗೆ ನೀಡಿ’ ಎಂಬ ನಮ್ಮ ಉದ್ಘಾಟನಾ ಅಭಿಯಾನವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ (ಐಎನ್‌ಸಿ) 138 ವರ್ಷದ ಪಯಣವನ್ನು ನೆನಪಿಸುತ್ತದೆ. ಬೆಂಬಲಿಗರು ₹ 138 ಅಥವಾ ₹ 1,380 ಈ ರೀತಿಯಾಗಿ ದೇಣಿಗೆ ನೀಡುವಂತೆ ಕೋರುತ್ತೇವೆ’ ಎಂದು ವೇಣುಗೋಪಾಲ್ ಹೇಳಿದರು.
ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳು ಪತ್ರಿಕಾಗೋಷ್ಠಿ, ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನದ ಬಗ್ಗೆ ಅರಿವು ಮೂಡಿಸುವರು. ಆಂದೋಲನವು ಆರಂಭದಲ್ಲಿ ಪಕ್ಷದ ಸಂಸ್ಥಾಪನಾ ದಿನವಾಗಿರುವ ಇದೇ 28ರವರೆಗೆ ಆನ್‌ಲೈನ್ ಮೂಲಕ ನಡೆಯಲಿದೆ. ನಂತರದಲ್ಲಿ ಸ್ವಯಂ ಸೇವಕರು ಮನೆ ಮನೆಗೆ ಭೇಟಿ ನೀಡಿ ಅಭಿಯಾನ ಮುಂದುವರಿಸುವರು. ಪ್ರತಿ ಬೂತ್‌ಗಳಲ್ಲಿ ಕನಿಷ್ಠ 10 ಮನೆಗಳಿಗೆ ತೆರಳಲಾಗುವುದು ಎಂದು ವಿವರಿಸಿದರು.
ರಾಜ್ಯ ಮಟ್ಟದ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಪಿಸಿಸಿ ಅಧ್ಯಕ್ಷರು ಮತ್ತು ಎಐಸಿಸಿ ಅಧಿಕಾರಿಗಳು ಕನಿಷ್ಠ ₹ 1380 ದೇಣಿಗೆ ನೀಡುವಂತೆ ತಿಳಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.