ADVERTISEMENT

ನಿರ್ಮಲಾ ಹೇಳಿಕೆಗೆ ಕಾಂಗ್ರೆಸ್‌ ಲೇವಡಿ

ಟ್ರಕ್‌, ಬಸ್‌ ಮಾರಾಟ ಇಳಿಕೆಗೂ ಹೊಸ ತಲೆಮಾರು ಕಾರಣವೇ?

ಪಿಟಿಐ
Published 11 ಸೆಪ್ಟೆಂಬರ್ 2019, 20:01 IST
Last Updated 11 ಸೆಪ್ಟೆಂಬರ್ 2019, 20:01 IST
   

ನವದೆಹಲಿ : ‘ಆಟೊಮೊಬೈಲ್‌ ಕ್ಷೇತ್ರದ ಕುಸಿತಕ್ಕೆ ಹೊಸ ತಲೆಮಾರಿನವರ ಮನಸ್ಥಿತಿಯೂ ಕಾರಣ’ ಎಂದು ಹಣ ಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್‌ ಲೇವಡಿ ಮಾಡಿದೆ.

‘ಆರ್ಥಿಕ ಹಿಂಜರಿತಕ್ಕೆ ಎಲ್ಲರನ್ನೂ ಹೊಣೆಯಾಗಿಸಿರುವ ಹಣಕಾಸು ಸಚಿವೆ, ಬಿಜೆಪಿ ನೇತೃತ್ವದ ಸರ್ಕಾರದ ವೈಫಲ್ಯವೇ ಈ ಸ್ಥಿತಿಗೆ ಕಾರಣ ಎಂಬುದನ್ನು ಮಾತ್ರ ಹೇಳಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಅಭಿಷೇಕ್‌ ಮನು ಸಿಂಘ್ವಿ ಟೀಕಿಸಿದ್ದಾರೆ.

‘ಹೊಸ ಕಾರನ್ನು ಕೊಳ್ಳುವ ಬದಲು ಓಲಾ, ಉಬರ್‌ ಟ್ಯಾಕ್ಸಿಗಳಲ್ಲಿ ಓಡಾಡುವುದು ಲೇಸು ಎಂಬ ಹೊಸ ತಲೆಮಾರಿನ ಯುವಕರ ಮನಸ್ಥಿತಿಯೂ ಆಟೊಮೊಬೈಲ್‌ ಕ್ಷೇತ್ರದ ಹಿನ್ನಡೆಗೆ ಕಾರಣ’ ಎಂದು ನಿರ್ಮಲಾ ಅವರು ಮಂಗಳವಾರ ಹೇಳಿದ್ದರು.

ADVERTISEMENT

‘ಹೌದು... ಒಳ್ಳೆಯದು. ಮತದಾರ ಮೇಲೆ ಆರೋಪ ಮಾಡಿ, ಪ್ರತಿಯೊಬ್ಬರ ಮೇಲೂ ಆರೋಪ ಹೊರಿಸಿ. ಆದರೆ, ಬಿಜೆಪಿಯ ವೈಫಲ್ಯವನ್ನು ಮಾತ್ರ ಹೇಳಬೇಡಿ ಅರ್ಥಸಚಿವರೇ’ ಎಂದು ಸಿಂಘ್ವಿ ಟ್ವೀಟ್‌ ಮಾಡಿದ್ದಾರೆ.

‘ಇಂದಿನ ಸ್ಥಿತಿಯಲ್ಲಿ ಅರ್ಥವ್ಯವಸ್ಥೆ ₹ 350 ಲಕ್ಷ ಕೋಟಿಯ ಗುರಿ ಸಾಧಿಸುವುದು ಹೇಗೆ ಸಾಧ್ಯ? ಮೋದಿ ಅವರ ಟ್ವಿಟ್ಟರ್‌ ಬೆಂಬಲಿಗರ ಸಂಖ್ಯೆ 5 ಕೋಟಿ ದಾಟಿದೆ. ದೇಶದ ಅರ್ಥ ವ್ಯವಸ್ಥೆ ಆ ಗುರಿ (5 ಟ್ರಿಲಿಯನ್‌ ಡಾಲರ್‌) ದಾಟುವುದು ಹೇಗೆ? ಯುವಕರಿಗೆ ಉದ್ಯೋಗ ಲಭಿಸುತ್ತಿಲ್ಲ, ಅದಕ್ಕೂ ವಿರೋಧಪಕ್ಷಗಳು ಕಾರಣವೇ? ಓಲಾ, ಉಬರ್‌ನವರು ಎಲ್ಲವನ್ನೂ ಹಾಳು ಮಾಡಿದರು...’ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯ ಮೂಲಕ ಲೇವಡಿ ಮಾಡಿದ್ದು, ‘ಟ್ರಕ್‌ ಮತ್ತು ಬಸ್‌ ಗಳ ಮಾರಾಟ ಕುಸಿತಕ್ಕೂ ಹೊಸ ತಲೆಮಾರಿನವರು ಖರೀದಿ ನಿಲ್ಲಿಸಿರುವುದೇ ಕಾರಣ ಅಲ್ಲವೇ’ ಎಂದು ಪ್ರಶ್ನಿಸಿದೆ.

ಕಾಲೆಳೆದ ಟ್ವೀಟಿಗರು

ಟ್ವಿಟರ್‌ ಮೂಲಕ ಹಲವರು ನಿರ್ಮಲಾ ಅವರ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.

‘ಹೊಸ ತಲೆಮಾರಿನವರು ಈಗ ನೆಹರೂ ಸ್ಥಾನಕ್ಕೆ ಬಂದಿದ್ದಾರೆ’ ಎಂದು ಕುನಾಲ್‌ ಕುಮಾರ್‌ ಎಂಬುವರು ಟೀಕಿಸಿದ್ದಾರೆ.

‘ನೀನು ಅಮೆರಿಕದ ಟಿ.ವಿ. ನೋಡುತ್ತಿರುವುದರಿಂದ ಡಾಲರ್‌ ಮೌಲ್ಯ ಏರಿಕೆಯಾಗಿದೆ, ಇನ್ನು ಮುಂದೆ ‘ಮನ್‌ ಕಿ ಬಾತ್‌’ ಮಾತ್ರ ಆಲಿಸು ಎಂದು ಹೊಸ ತಲೆಮಾರಿನ ಯುವಕನ ಮನವೊಲಿಸಿದ್ದೇನೆ. ರಾಷ್ಟ್ರಕ್ಕಾಗಿ ನನ್ನ ಪಾಲಿನ ಕೆಲಸ ಮಾಡಿದ್ದೇನೆ’ ಎಂದು ಸಾಕೇತ್‌ ಗೋಖಲೆ ಎಂಬುವರು ಟ್ವೀಟ್‌ ಮಾಡಿದ್ದಾರೆ.

ನಿರ್ಮಲಾ ಅವರ ಹೇಳಿಕೆಯನ್ನು ಲೇವಡಿ ಮಾಡುವಂಥ ಅನೇಕ ವ್ಯಂಗ್ಯ ವಿಡಿಯೊಗಳೂ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.