ADVERTISEMENT

ಮಹಿಂದ್ರಾ ಕಂಪನಿಗೆ ಅನುಕೂಲ ಮಾಡಿದ ಸೆಬಿ: ಕಾಂಗ್ರೆಸ್‌ ಆರೋಪ

ಮಾಧವಿ ಬುಚ್‌ ಅವರ ಹಿತಾಸಕ್ತಿ ಸಂಘರ್ಷ

ಪಿಟಿಐ
Published 10 ಸೆಪ್ಟೆಂಬರ್ 2024, 20:24 IST
Last Updated 10 ಸೆಪ್ಟೆಂಬರ್ 2024, 20:24 IST
ಪವನ್‌ ಖೇರಾ
ಪವನ್‌ ಖೇರಾ   

ನವದೆಹಲಿ: ‘ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್‌ ತಮ್ಮ ಕನ್ಸಲ್ಟೆನ್ಸಿ ಸರ್ವೀಸ್‌ ಸಂಸ್ಥೆ ‘ಅರೋರಾ ಅಡ್ವೈಸರಿ ಪ್ರೈವೆಟ್‌ ಲಿ.’ನಲ್ಲಿ ಶೇ 99ರಷ್ಟು ಷೇರು ಹೊಂದಿದ್ದಾರೆ. ‘ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಗ್ರೂಪ್‌’ ಕಂಪನಿಗೂ ತಮ್ಮ ಸಂಸ್ಥೆಯ ಮೂಲಕ ಸೇವೆ ನೀಡಿದ್ದಾರೆ. ಮಾಧವಿ ಅವರ ಪತಿ ಧವಳ್‌ ಬುಚ್‌ ಅವರು ಇದೇ ಕಂಪನಿಯಿಂದ ₹4.78 ಕೋಟಿ ಆದಾಯಗಳಿಸಿದ್ದಾರೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಸಬಿ ಅಧ್ಯಕ್ಷೆ ಮಾಧವಿ ಅವರ ಕುರಿತು ಕಾಂಗ್ರೆಸ್‌ ತನ್ನ ಸರಣಿ ಪತ್ರಿಕಾಗೋಷ್ಠಿಯನ್ನು ಮುಂದುವರಿಸಿದ್ದು, ಕಾಂಗ್ರೆಸ್‌ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಅವರು ಮಂಗಳವಾರ ಮತ್ತೊಂದು ಪತ್ರಿಕಾಗೋಷ್ಠಿಯ ಮೂಲಕ ಹಲವು ಆರೋಪಗಳನ್ನು ಮಾಡಿದರು.

‘ಸೆಬಿ ಅಧ್ಯಕ್ಷೆಯಾದ ಬಳಿಕವೂ ಮಾಧವಿ ಅವರು ಅರೋರಾ ಸಂಸ್ಥೆಯಲ್ಲಿ ಶೇ 99ರಷ್ಟು ಷೇರು ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್‌ ಹೇಳಿತ್ತು. ಈ ಆರೋಪವನ್ನು ತಳ್ಳಿಹಾಕಿದ್ದ ಮಾಧವಿ, ‘ನಾನು ಅಧ್ಯಕ್ಷೆಯಾದ ಬಳಿಕ ಈ ಸಂಸ್ಥೆ ನಿಷ್ಕ್ರಿಯವಾಗಿದೆ’ ಎಂದಿದ್ದರು. ವಾಸ್ತವಾಂಶ ಏನೆಂದರೆ, 2024ರ ಮಾರ್ಚ್‌ 31ರವರೆಗಿನ ಮಾಹಿತಿಯ ಪ್ರಕಾರ ಮಾಧವಿ ಅವರು ಸಂಸ್ಥೆಯಲ್ಲಿ ಷೇರು ಹೊಂದಿದ್ದಾರೆ ಮತ್ತು ಈ ದಿನದವರೆಗೂ ಸಂಸ್ಥೆ ಚಾಲ್ತಿಯಲ್ಲಿದೆ’ ಎಂದರು.

ADVERTISEMENT

‘2016–17ರಿಂದ 2023–24ರವರೆಗೆ (2017–18 ಮತ್ತು 2018–19 ಹೊರತುಪಡಿಸಿ) ಮಾಧವಿ ಅವರಿಗೆ ಅರೋರಾ ಸಂಸ್ಥೆಯ ಮೂಲಕ ₹2.95 ಕೋಟಿ ಆದಾಯ ಬಂದಿದೆ. ಈ ವರ್ಷಗಳಲ್ಲಿ ಮಾಧವಿ ಅವರು ಕೆಲವು ವರ್ಷ ಸೆಬಿಯ ಪೂರ್ಣಾವಧಿ ಸದಸ್ಯೆಯಾಗಿದ್ದರು, ನಂತರ ಸೆಬಿ ಅಧ್ಯಕ್ಷೆಯಾದರು’ ಎಂದು ಮಾಹಿತಿ ನೀಡಿದರು.

‘ಈ ₹2.95 ಕೋಟಿಯಲ್ಲಿ ₹2.59 ಕೋಟಿ ಆದಾಯವು ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಕಂಪನಿ ಒಂದರಿಂದಲೇ ಸಂದಿದೆ. ಧವಳ್‌ ಬುಚ್ ಅವರಿಗೂ ವೈಯಕ್ತಿಕವಾಗಿ ₹4.78 ಕೋಟಿಯನ್ನು ಕಂಪನಿಯು ನೀಡಿದೆ. ಈ ಎಲ್ಲ ಬೆಳವಳಿಗೆಗಳೂ ಮಾಧವಿ ಅವರು ಸೆಬಿಯ ಪೂರ್ಣಾವಧಿ ಸದಸ್ಯೆ, ಅಧ್ಯಕ್ಷೆಯಾಗಿರುವ ಕಾಲಘಟ್ಟದಲ್ಲಿ ನಡೆದಿವೆ’ ಎಂದು ವಿವರಿಸಿದರು.

‘ಮಾಧವಿ ಅವರು ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಕಂಪನಿ ಪರವಾಗಿ 5 ಆದೇಶಗಳನ್ನು ಅಥವಾ ಅನುಮೋದನೆಗಳನ್ನು ನೀಡಿದ ಅವಧಿಯಲ್ಲಿಯೇ ಧವಳ್‌ ಬುಚ್‌ ಅವರಿಗೆ ಇದೇ ಕಂಪನಿಯಿಂದ ಆದಾಯ ಸಂದಿದೆ! ಪೆಗಾಸಸ್‌ ಮೂಲಕ ಮಾಹಿತಿ ಸಂಗ್ರಹಿಸುವ ಪ್ರಧಾನಿ ಮೋದಿ ಅವರಿಗೆ ಮಾಧವಿ ಅವರ ಈ ಎಲ್ಲ ವ್ಯವಹಾರದ ಕುರಿತ ಮಾಹಿತಿಗಳು ಸಿಗಲಿಲ್ಲವೇ’ ಎಂದು ಪವನ್‌ ಖೇರಾ ಪ್ರಶ್ನಿಸಿದರು.

‘ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಲಿಮಿಟೆಡ್‌, ಡಾ. ರೆಡ್ಡೀಸ್‌, ಐಸಿಐಸಿಐ, ಸೆಂಬ್‌ಕಾರ್ಪ್‌ ಆ್ಯಂಡ್‌ ವಿಷ್ಣು ಲೀಸಿಂಗ್‌ ಆ್ಯಂಡ್‌ ಫೈನಾನ್ಸ್‌, ಪಿಡಿಲೈಟ್‌– ಇವು ಅರೋರಾ ಸಂಸ್ಥೆಯ ಗ್ರಾಹಕರು’ ಎಂದು ಕಾಂಗ್ರೆಸ್‌ ಹೇಳಿದೆ.

‘ಸಾರ್ವಜನಿಕ ಲೆಕ್ಕ ಸಮಿತಿಗೆ ವಿಚಾರಣೆ ನಡೆಸುವ ಅಧಿಕಾರವಿಲ್ಲ’
‘ಸಾರ್ವಜನಿಕ ಲೆಕ್ಕ ಸಮಿತಿಯ (ಪಿಎಸಿ) ಮುಂದೆ ವಿಚಾರಣೆಗೆ ಸೆಬಿ ಅಧ್ಯಕ್ಷೆ ಮಾಧವಿ ಅವರನ್ನು ಕರೆಸಬೇಕು’ ಎಂದು ಟಿಎಂಸಿ ಸಂಸದ ಸೌಗತ ರಾಯ್‌ ಅವರು ಮಂಗಳವಾರ ಆಗ್ರಹಿಸಿದರು. ಆದರೆ ಬಿಜೆಪಿ ನಾಯಕ ನಿಶಿಕಾಂತ್‌ ದುಬೆ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಜಲ ಜೀವನ ಮಿಷನ್‌ನ ಕಾರ್ಯಸಾಧನೆ ಕುರಿತ ಲೆಕ್ಕಪರಿಶೋಧನಾ ಸಭೆಯಲ್ಲಿ ಸೌಗತ ರಾಯ್‌ ಅವರು ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದುಬೆ ‘ಸಿಎಜಿಯ ಪ್ರಧಾನ ಲೆಕ್ಕಪರಿಶೋಧಕನಿಗೇ ಸೆಬಿಯ ಲೆಕ್ಕಪರಿಶೋಧನೆ ಮಾಡಲು ಸಾಧ್ಯವಿಲ್ಲ. ಹೀಗೆ ಮಾಡುವುದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಬೇಕು. ಆದ್ದರಿಂದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸೆಬಿಯ ಅಧಿಕಾರಿಗಳಿಗೆ ಸಮಿತಿಯ ಮುಂದೆ ಹಾಜರಾಗುವಂತೆ ನೋಟಿಸ್‌ ನೀಡುವ ಅಧಿಕಾರವಿಲ್ಲ. ಒಂದೊಮ್ಮೆ ಸರ್ಕಾರ ಸೆಬಿಗೆ ಒದಗಿಸಿದ ಹಣದಲ್ಲಿ ಅವ್ಯವಹಾರವಾಗಿದ್ದಲ್ಲಿ ಇದಕ್ಕೆ ಸೂಕ್ತ ಸಾಕ್ಷ್ಯಗಳಿದ್ದಲ್ಲಿ ಮಾತ್ರವೇ ಸಮಿತಿಯು ಸೆಬಿ ಅಧಿಕಾರಿಗಳಿಗೆ ನೋಟಿಸ್‌ ನೀಡಬಹುದು’ ಎಂದರು.
ಆರೋಪ ಸುಳ್ಳು ಎಂದ ಮಹಿಂದ್ರಾ ಕಂಪನಿ
ನಮ್ಮ ಕಂಪನಿಗೆ ಅನುಕೂಲ ಮಾಡಿಕೊಡಿ ಎಂದು ನಾವು ಸೆಬಿಗೆ ಎಂದಿಗೂ ಮನವಿ ಮಾಡಿಲ್ಲ. ಪೂರೈಕೆ ವ್ಯವಸ್ಥೆಯಲ್ಲಿ ಧವಳ್‌ ಬುಚ್‌ ಅವರಿಗೆ ಇರುವ ಪರಿಣತಿಯ ಕಾರಣಕ್ಕಾಗಿ ಅವರನ್ನು 2019ರಲ್ಲಿ ನೇಮಕ ಮಾಡಿಕೊಂಡೆವು. ಮಾಧವಿ ಅವರು ಸೆಬಿಯ ಅಧ್ಯಕ್ಷೆಯಾಗುವ ಮೂರು ವರ್ಷ ಮೊದಲೇ ಧವಳ್‌ ಅವರು ನಮ್ಮ ಕಂಪನಿ ಸೇರಿಕೊಂಡಿದ್ದರು. ಅವರ ಕೆಲಸಕ್ಕಾಗಿ ನಾವು ಅವರಿಗೆ ಸಂಬಳ ನೀಡಿದ್ದೇವೆಯಷ್ಟೇ. ಕಂಪನಿ ಪರವಾಗಿ ಸೆಬಿಯು ಐದು ಅನುಮೋದನೆಗಳನ್ನು ನೀಡಿದೆ ಎಂದು ಆರೋಪಿಸಲಾಗಿದೆ. ಆದರೆ ಇವೆಲ್ಲವೂ ಸುಳ್ಳು. ಐದರಲ್ಲಿ ಮೂರು ಅನುಮೋದನೆಗಳು ನಮ್ಮ ಕಂಪನಿಗೆ ಅಥವಾ ನಮ್ಮ ಗ್ರೂಪ್‌ನ ಇತರೆ ಕಂಪನಿಗಳಿಗೆ ಸಂಬಂಧಿಸಿದವಲ್ಲ. ಸೆಬಿ ನೀಡಿದ ಒಂದು ಅನುಮೋದನೆಯು 2018ರ ಮಾರ್ಚ್‌ನಲ್ಲಿ ಬಂದಿದ್ದು. ಆಗಿನ್ನು ಧವಳ್‌ ಅವರು ನಮ್ಮ ಕಂಪನಿಯೊಂದಿಗೆ ಇರಲೇ ಇಲ್ಲ.
–ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಗ್ರೂಪ್‌
ತಮ್ಮ ಸ್ನೇಹಿತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಮೋದಿ–ಶಾ ಸಮಿತಿ ಮಾಧವಿ ಅವರನ್ನು ಸೆಬಿ ಅಧ್ಯಕ್ಷೆಯನ್ನಾಗಿ ನೇಮಿಸಿದೆಯೇ ಅಥವಾ ಮಾಧವಿ ಅವರ ಅಕ್ರಮ ಹಣಕಾಸಿನ ವ್ಯವಹಾರದ ಕುರಿತು ಅವರಿಗೆ ಮಾಹಿತಿ ಇರಲಿಲ್ಲವೇ? ನೋಂದಾಯಿತ ಕಂಪನಿಗಳ ಕುರಿತು ಮಾಧವಿ ಅವರು ನೀಡಿದ ಅನುಮೋದನೆಗಳು, ಆದೇಶಗಳು ಅವರ ಗ್ರಾಹಕ ಕಂಪನಿಗಳಿಂದ ಪಡೆದ ಆದಾಯದ ಆಧಾರದಲ್ಲಿ ತೆಗೆದುಕೊಂಡಿರುವುದೇ?
–ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ
ಈ ಹಿಂದಿನ ಪತ್ರಿಕಾಗೋಷ್ಠಿಗಳಲ್ಲಿ ನಾನು ಇದೊಂದು ಹಿತಾಸಕ್ತಿ ಸಂರ್ಘಷದ ವಿಚಾರ ಎಂದಿದ್ದೆ. ಈಗ ಇದೊಂದು ಭ್ರಷ್ಟಾಚಾರದ ವಿಚಾರ ಎಂದು ಹೇಳಿದ ರಷ್ಟೇ ಸಾಲುವುದಿಲ್ಲ. ಬದಲಿಗೆ ಇದೊಂದು ಕ್ರಿಮಿನಲ್‌ ಸಂಚು. ಉದ್ದೇಶ ಪೂರ್ವಕವಾಗಿಯೇ ಹಲವು ಮಾಹಿತಿಗಳನ್ನು ಮಾಧವಿ ಅವರು ಮುಚ್ಚಿಟ್ಟಿ ದ್ದಾರೆ. ಉದ್ದೇಶಪೂರ್ವಕವಾಗಿಯೇ ಅವರು ಹಲವು ಸುಳ್ಳು ಹೇಳಿದ್ದಾರೆ..
–ಪವನ್‌ ಖೇರಾ, ಕಾಂಗ್ರೆಸ್‌ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.