ಜೈಪುರ: ಹಾಲಿಗೆ ಬಿದ್ದ ನೊಣವನ್ನು ತೆಗೆದುಹಾಕುವ ಹಾಗೆ ಗುಜ್ಜರ್ ಸಮುದಾಯದ ನಾಯಕನನ್ನು ಕಾಂಗ್ರೆಸ್ ಪಕ್ಷವು ಅಧಿಕಾರದಿಂದ ಹೊರಗಿಟ್ಟಿದೆ. ಇದರೊಂದಿಗೆ ಇಡೀ ಸಮುದಾಯವನ್ನು ಆ ಪಕ್ಷ ಅವಮಾನಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹಾಗೂ ಅವರ ತಂದೆ ರಾಜೇಶ್ ಪೈಲಟ್ ಅವರನ್ನುದ್ದೇಶಿಸಿ ಮೋದಿ ಈ ರೀತಿಯ ಹೇಳಿಕೆ ನೀಡಿದ್ದಾರೆ.
200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಚುನಾವಣೆ ನಿಗದಿಯಾಗಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ಇಂದು (ನವೆಂಬರ್ 23) ತೆರೆಬೀಳಲಿದೆ.
ರಾಜ್ಸಮಂದ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಮೋದಿ, 'ಗುಜ್ಜರ್ ಸಮುದಾಯದ ಪುತ್ರ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಅವರು ಜೀವವನ್ನೇ ಪಣಕ್ಕಿಟ್ಟಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೇರಿದ ಬಳಿಕ ಅವರನ್ನು ಹಾಲಿನಿಂದ ನೊಣವನ್ನು ತೆಗೆದುಹಾಕಿದಂತೆ ಹೊರಗೆ ಇಡಲಾಗಿದೆ' ಎಂದಿದ್ದಾರೆ.
ಮುಂದುವರಿದು, 'ಅವರು (ಕಾಂಗ್ರೆಸ್‌ನವರು) ರಾಜೇಶ್ ಪೈಲಟ್ ಅವರಿಗೂ ಇದೇ ರೀತಿ ಮಾಡಿದ್ದರು' ಎಂದು ಆರೋಪಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷವು ಗುಜ್ಜರ್ ಸಮುದಾಯದವನ್ನು ಸದಾ 'ಅವಮಾನಿಸಿದೆ' ಎಂದು ಒತ್ತಿ ಹೇಳಿದ್ದಾರೆ.
ಬುಧವಾರವೂ ಇದೇ ರೀತಿಯ ಹೇಳಿಕೆ ನೀಡಿದ್ದ ಮೋದಿ, 'ಕಾಂಗ್ರೆಸ್‌ನಲ್ಲಿ ಸತ್ಯ ಹೇಳುವವರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತದೆ. ಆ ಪಕ್ಷವು ರಾಜೇಶ್ ಪೈಲಟ್ ಅವರನ್ನು ನಡೆಸಿಕೊಂಡ ಹಾಗೆಯೇ, ಅವರ ಮಗ ಸಚಿನ್ ಪೈಲಟ್ ಅವರನ್ನೂ ಶಿಕ್ಷಿಸುತ್ತಿದೆ' ಎಂದಿದ್ದರು.
ಗುಜ್ಜರ್ ಸಮುದಾಯದ ಪ್ರಬಲ ನಾಯಕರಾಗಿರುವ ಸಚಿನ್ ಪೈಲಟ್ ಪೂರ್ವ ರಾಜಸ್ಥಾನದ ಟೊಂಕ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಸಿಎಂ ವಿರುದ್ಧ ಬಂಡಾಯ ಸಾರಿದ್ದ ಪೈಲಟ್
2020ರ ಜುಲೈನಲ್ಲಿ, ಪೈಲಟ್ ಸೇರಿದಂತೆ ಕಾಂಗ್ರೆಸ್‌ನ 19 ಶಾಸಕರು ಮುಖ್ಯಮಂತ್ರಿ ಅಶೋಕ್ ಗೆಹಲೋತ್ ನಾಯಕತ್ವದ ವಿರುದ್ಧ ಬಂಡಾಯ ಸಾರಿದ್ದರು. ತಿಂಗಳವರೆಗೂ ಮುಂದುವರಿದಿದ್ದ ಈ ಬಿಕ್ಕಟ್ಟು, ಪಕ್ಷದ ಹೈಕಮಾಂಡ್ ಮಧ್ಯಪ್ರವೇಶದ ಬಳಿಕ ಶಮನಗೊಂಡಿತ್ತು. ಅದಾದ ಬಳಿಕ, ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.