ನವದೆಹಲಿ:ರಾಹುಲ್ ಗಾಂಧಿಯವರು ಪಕ್ಷದ ಅಧ್ಯಕ್ಷನ ಹುದ್ದೆಗೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವಂತೆ ಅವರ ಮನವೊಲಿಸುವುದರಲ್ಲೇ ಕಾಂಗ್ರೆಸ್ ಒಂದು ತಿಂಗಳು ವ್ಯರ್ಥ ಮಾಡಿತು ಎಂದು ಪಕ್ಷದ ಹಿರಿಯ ನಾಯಕ ಕರಣ್ ಸಿಂಗ್ ಹೇಳಿದ್ದಾರೆ.
‘ಅವರ (ರಾಹುಲ್ ಗಾಂಧಿ) ದೃಢ ನಿರ್ಧಾರವನ್ನು ಗೌರವಿಸುವ ಬದಲು ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಪೀಡಿಸುತ್ತಾ ಒಂದು ತಿಂಗಳು ವ್ಯರ್ಥ ಮಾಡಲಾಯಿತು. ಅವರನ್ನು ಬಲವಂತಪಡಿಸಬಾರದು. ಆರು ವಾರಗಳು ಕಳೆದರೂ ಪರ್ಯಾಯ ವ್ಯವಸ್ಥೆ ಆಗಿಲ್ಲ’ ಎಂದು ಕರಣ್ ಸಿಂಗ್ ಅವರುಎನ್‌ಡಿಟಿವಿಗೆತಿಳಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಸಾರಥ್ಯಕ್ಕೆ ಖರ್ಗೆಯೋ, ಶಿಂಧೆಯೋ?
‘ನಾವು ರಾಹುಲ್ ಅವರ ಮೇಲೆ ಒತ್ತಡ ಹೇರಬಾರದು. ಅವರೊಬ್ಬ ಗೌರವಾನ್ವಿತ ವ್ಯಕ್ತಿ, ಕಠಿಣ ಪರಿಶ್ರಮ ಪಟ್ಟಿದ್ದಾರೆ. ಅವರನ್ನು ಗೌರವಯುತವಾಗಿ ಹಿಂದೆ ಸರಿಯಲು ಬಿಟ್ಟುಬಿಡಿ. ಅವರ ನಿರ್ಧಾರವನ್ನು ಮೊದಲಿನಿಂದಲೂ ಬೆಂಬಲಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಹೊಸ ಅಧ್ಯಕ್ಷರ ನೇಮಕಕ್ಕೆ ಕೆಲವು ಸಲಹೆಗಳನ್ನು ನೀಡಿ ಹೇಳಿಕೆಯೊಂದನ್ನೂ ಬಿಡುಗಡೆ ಮಾಡಿದ್ದಾರೆ.
ನೂತನ ಅಧ್ಯಕ್ಷರ ನೇಮಕಕ್ಕೆ ಸಬಂಧಿಸಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕು. ಈ ಸಭೆಯ ಅಧ್ಯಕ್ಷತೆಯನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಹಿಸಿಕೊಳ್ಳಬೇಕು ಎಂದು ಕರಣ್ ಸಿಂಗ್ ಸಲಹೆ ನೀಡಿದ್ದಾರೆ.
ದೇಶದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ವಲಯಗಳಿಗೆ ಒಬ್ಬರಂತೆ ಉಪಾಧ್ಯಕ್ಷರನ್ನು ನೇಮಿಸಬೇಕು. ಈ ಹುದ್ದೆಗಳಲ್ಲಿ ಯುವಕರಿಗೆ ಆದ್ಯತೆ ನೀಡಬೇಕು ಎಂದಿರುವ ಸಿಂಗ್, ಅಧ್ಯಕ್ಷ ಹುದ್ದೆಗೆಮುಕುಲ್ ವಾಸ್ನಿಕ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮಿಲಿಂದ್ ದೇವ್ರಾ ಇವರನ್ನು ಉಪಾಧ್ಯಕ್ಷರಾಗಿ ನೇಮಕ ಮಾಡುವ ಸಾಧ್ಯತೆ ಬಗ್ಗೆಯೂ ಕಾಂಗ್ರೆಸ್ ಪರಿಶೀಲನೆ ನಡೆಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಈ ವಾರಾಂತ್ಯ ಸಭೆ ಸೇರುವ ನಿರೀಕ್ಷೆ ಇದೆ.
ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್ ಗಾಂಧಿ ಇತ್ತೀಚೆಗೆ ಅಧಿಕೃತವಾಗಿ ಹುದ್ದೆಯಿಂದ ಕೆಳಕ್ಕಿಳಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.