ಚಂಡೀಗಢ: ಈ ಬಾರಿಯ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.
ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, 'ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸಲಿದೆ' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದಕ್ಕೆ ಉತ್ತರಿಸಿದ ಅವರು, 'ಈ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ' ಎಂದು ಹೇಳಿದ್ದಾರೆ.
'ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ಜನರು ನಿರ್ಧರಿಸಿದ್ದಾರೆ' ಎಂದು 77 ವರ್ಷದ ಹೂಡಾ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಕೂಡಾ ಗೆಲುವಿನ ನಿರೀಕ್ಷೆ ವ್ಯಕ್ತಪಡಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಹೂಡಾ, 'ಚುನಾವಣಾ ಫಲಿತಾಂಶ ಬಂದಾಗ ಎಲ್ಲವೂ ಸ್ಪಷ್ಟವಾಗಲಿದೆ' ಎಂದು ಹೇಳಿದ್ದಾರೆ.
'ಬಿಜೆಪಿ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ರಾಜ್ಯವು ಭ್ರಷ್ಟಾಚಾರ, ನಿರುದ್ಯೋಗದಿಂದ ನಲುಗಿದೆ. ರೈತರು, ಬಡವರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರು ಬೇಸತ್ತು ಹೋಗಿದ್ದಾರೆ' ಎಂದು ಹೇಳಿದ್ದಾರೆ.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಇಂದು (ಅ.5) ಏಕಕಾಲದಲ್ಲಿ ಮತದಾನ ನಡೆದಿತ್ತು. ಅಕ್ಟೋಬರ್ 8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.