ADVERTISEMENT

ಕುಶಾಗ್ರಮತಿ ರಾಜಕಾರಣಿ ಅಹ್ಮದ್‌ ಪಟೇಲ್‌ ನಡೆದು ಬಂದ ದಾರಿ...

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 5:52 IST
Last Updated 25 ನವೆಂಬರ್ 2020, 5:52 IST
ಅಹ್ಮದ್‌ ಪಟೇಲ್‌ ( ಚಿತ್ರ ಕೃಪೆ ಪ್ರಿಯಾಂಕ ಗಾಂಧಿ ಟ್ವಿಟರ್‌)
ಅಹ್ಮದ್‌ ಪಟೇಲ್‌ ( ಚಿತ್ರ ಕೃಪೆ ಪ್ರಿಯಾಂಕ ಗಾಂಧಿ ಟ್ವಿಟರ್‌)   

ಕಾಂಗ್ರೆಸ್‌ ಪಕ್ಷದ ಚಾಣಾಕ್ಷ ಹಾಗೂ ಕುಶಾಗ್ರಮತಿ ರಾಜಕಾರಣಿ ಎಂದೇ ಖ್ಯಾತಿಯಾಗಿದ್ದ ಅಹ್ಮದ್‌ ಪಟೇಲ್‌ ನಿಧನದಿಂದ ಕಾಂಗ್ರೆಸ್‌ ಪಕ್ಷ ಬಡವಾದಂತಾಗಿದೆ.

ಪಕ್ಷದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಧಾವಿಸಿ ಬಂದು ತಮ್ಮ ಕುಶಾಗ್ರಮತಿಯಿಂದ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಈ ಕಾರಣಕ್ಕಾಗಿಯೇ ಅವರು ಟ್ರಬಲ್‌ ಶೂಟರ್‌ ಎಂದೇ ಖ್ಯಾತಿಯಾಗಿದ್ದರು. ಚುನಾವಣೆ ಸಂದರ್ಭ ಹಾಗೂ ವಿವಿಧ ರಾಜ್ಯಗಳಲ್ಲಿನ ಕಾಂಗ್ರೆಸ್‌ ಪಕ್ಷದಸರ್ಕಾರ ರಚನೆಯಲ್ಲಿ ಅವರ ಪಾತ್ರವಿರುತ್ತಿತ್ತು.

ಅಹ್ಮದ್‌ ಪಟೇಲ್‌ ಸೋನಿಯಾ ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದರು. ಅಲ್ಲದೇ ಅವರಿಗೆ ಮಾರ್ಗದರ್ಶಕರಾಗಿಯೂ ಕೆಲಸ ಮಾಡುತ್ತಿದ್ದರು.
ಯುಪಿಎ ಸರ್ಕಾರದ ಅವಧಿಯಲ್ಲಿಸೋನಿಯಾ ಗಾಂಧಿ ಅವರು ಅಹ್ಮದ್‌ ಪಟೇಲ್‌ರವರ‌ ಅಭಿಪ್ರಾಯ ಪಡೆದನಂತರವೇಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಇದೇಅವಧಿಯಲ್ಲಿ ಪಕ್ಷದ ದಂಡನಾಯಕರಾಗಿ ಅವರುಕೆಲಸ ಮಾಡಿದ್ದರು.

ADVERTISEMENT

ಗುಜರಾತ್‌ ರಾಜ್ಯದ ಕೈಗಾರಿಕನಗರ ಭರೂಚ್‌ ಜಿಲ್ಲೆಯ ಅಂಕಲೇಶ್ವರ‌ ಸಮೀಪದಲ್ಲಿರುವ ಪಿರಾಮನ್‌ ಎಂಬ ಹಳ್ಳಿಯಲ್ಲಿ ಅಹ್ಮದ್‌ ಪಟೇಲ್‌ 1949 ಆಗಸ್ಟ್‌ 21ರಂದು ಜನಿಸಿದರು. ಪಟೇಲ್ ಅವರ‌ ತಂದೆ ತಾಯಿಗಳು ಕೃಷಿಕರಾಗಿದ್ದರು. ತಂದೆ ಇಶಾಕ್‌ಜೀ ಮೊಹಮ್ಮದ್‌ ಅವರ ಪ್ರೇರಣೆಯಿಂದ ಕೃಷಿ ವಿಜ್ಞಾನದಲ್ಲಿ ಪದವಿ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಅಹ್ಮದ್‌ ಪಟೇಲ್‌ 70ರ ದಶಕದಲ್ಲಿ ಕಾಂಗ್ರೆಸ್‌ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿದರು.

1977ರಲ್ಲಿ ಗುಜರಾತ್‌ ರಾಜ್ಯದ ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷರಾಗುವ ಮೂಲಕ ಪಕ್ಷದಲ್ಲಿ ಉನ್ನತ ಹುದ್ದೆಯನ್ನು ಪಡೆದರು. ಅದೇ ವರ್ಷ ಮಾರ್ಚ್‌ ತಿಂಗಳಲ್ಲಿ ನಡೆದ 6ನೇ ಲೋಕಸಭಾ ಚುನಾವಣೆಯಲ್ಲಿಗೆಲುವು ಸಾಧಿಸಿ ಸಂಸತ್‌ ಪ್ರವೇಶ ಮಾಡಿದರು.

ಮೂರು ಬಾರಿ ಲೋಕಸಭೆ ಹಾಗೂ ನಾಲ್ಕು ಸಲ ರಾಜ್ಯಸಭೆಗೆ ಅಹ್ಮದ್‌ ಪಟೇಲ್‌ ಆಯ್ಕೆಯಾಗಿದ್ದರು. ಇದರ ನಡುವೆ ಪಕ್ಷದ ಸಂಘಟನಾ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿಯೂ ಅವರು ಕೆಲಸ ಮಾಡಿದ್ದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿಯಲ್ಲಿಸೋನಿಯಾ ಗಾಂಧಿ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದರು. ನೆಹರೂ–ಗಾಂಧಿ ಮನೆತನದ ನಿಕಟವರ್ತಿಯಾಗಿ ಅವರ ಕುಟುಂಬದ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು.

ಇತ್ತೀಚಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದಡಿಯಲ್ಲಿ ಅಹ್ಮದ್‌ ಪಟೇಲ್‌ ಇ.ಡಿ. ವಿಚಾರಣೆಗೆ ಒಳಗಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.