ADVERTISEMENT

ವಂಚನೆಯ ಉದ್ದೇಶವಿಲ್ಲದ ಸಹಮತದ ಸಂಬಂಧ ಅತ್ಯಾಚಾರವಲ್ಲ: ಹೈಕೋರ್ಟ್

ಪಿಟಿಐ
Published 16 ಅಕ್ಟೋಬರ್ 2024, 0:10 IST
Last Updated 16 ಅಕ್ಟೋಬರ್ 2024, 0:10 IST
<div class="paragraphs"><p>ಅಲಹಾಬಾದ್ ಹೈಕೋರ್ಟ್</p></div>

ಅಲಹಾಬಾದ್ ಹೈಕೋರ್ಟ್

   

ಪ್ರಯಾಗರಾಜ್: ಆರಂಭದಿಂದಲೂ ವಂಚನೆಯ ಉದ್ದೇಶವು ಇಲ್ಲದಿದ್ದಾಗ, ಸಹಮತದ ಆಧಾರದ ವಿವಾಹೇತರ ದೈಹಿಕ ಸಂಬಂಧವು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 375ರ ಅಡಿಯಲ್ಲಿ ವ್ಯಾಖ್ಯಾನಿಸಿರುವ ಅತ್ಯಾಚಾರ ಆಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಈಚೆಗೆ ಹೇಳಿದೆ.

ಮಹಿಳೆಯೊಂದಿಗೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಬಂಧ ಹೊಂದುವುದನ್ನು ಅತ್ಯಾಚಾರ ಎಂದು ಐಪಿಸಿಯ ಸೆಕ್ಷನ್ 375 ಹೇಳುತ್ತದೆ.

ADVERTISEMENT

ಮದುವೆ ಆಗುವುದಾಗಿ ನಂಬಿಸಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಶ್ರೇಯ್ ಗುಪ್ತಾ ಎನ್ನುವವರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಮದುವೆ ಆಗುವುದಾಗಿ ನೀಡುವ ಭರವಸೆಯು ಆರಂಭದಿಂದಲೂ ವಂಚನೆಯ ಉದ್ದೇಶವನ್ನು ಹೊಂದಿತ್ತು ಎಂಬುದನ್ನು ಸಾಬೀತು ಮಾಡಲು ಆಗದಿದ್ದರೆ, ಅಂತಹ ಭರವಸೆಯ ಆಧಾರದಲ್ಲಿ ಮೂಡುವ ಸಮ್ಮತಿಯ ಲೈಂಗಿಕ ಸಂಬಂಧವು ಅತ್ಯಾಚಾರ ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

‘ಸಂಬಂಧದ ಆರಂಭದಿಂದಲೂ ಆರೋಪಿಯು, ಭರವಸೆ ನೀಡುವಾಗ ವಂಚಿಸುವ ಉದ್ದೇಶವನ್ನು ಹೊಂದಿದ್ದ ಎಂಬ ಆರೋಪ ಇಲ್ಲದಿದ್ದರೆ, ಅಂತಹ ಭರವಸೆಯನ್ನು ಸುಳ್ಳು ಭರವಸೆ ಎಂದು ಪರಿಗಣಿಸಲು ಆಗುವುದಿಲ್ಲ’ ಎಂದು ಕೋರ್ಟ್ ಹೇಳಿದೆ.

ಶ್ರೇಯ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅನೀಶ್ ಕುಮಾರ್ ಗುಪ್ತಾ ಅವರು ಈ ಆದೇಶ ನೀಡಿದ್ದಾರೆ.

ತನ್ನ ಪತಿಯ ಮರಣದ ನಂತರ, ಮದುವೆ ಆಗುವ ಭರವಸೆ ನೀಡಿ ಶ್ರೇಯ್ ಅವರು ತನ್ನ ಜೊತೆ ದೈಹಿಕ ಸಂಬಂಧ ಹೊಂದಿದ್ದರು ಎಂದು ಮಹಿಳೆಯು ಮೊರಾದಾಬಾದ್ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮದುವೆ ಆಗುವುದಾಗಿ ಮತ್ತೆ ಮತ್ತೆ ಭರವಸೆ ನೀಡಿದ್ದ ಶ್ರೇಯ್ ಅವರು ನಂತರ ಮಾತಿಗೆ ತಪ್ಪಿದರು. ಬೇರೊಬ್ಬ ಮಹಿಳೆಯ ಜೊತೆ ಅವರಿಗೆ ನಿಶ್ಚಿತಾರ್ಥ ಆಯಿತು ಎಂದು ದೂರಿನಲ್ಲಿ ಹೇಳಲಾಗಿತ್ತು.

ಶ್ರೇಯ್ ಅವರು ಹಣ ಸುಲಿಗೆ ಮಾಡಿದ್ದರು. ₹ 50 ಲಕ್ಷ ನೀಡದೆ ಇದ್ದರೆ, ಖಾಸಗಿ ಕ್ಷಣಗಳ ದೃಶ್ಯಗಳನ್ನು ಬಹಿರಂಗಪಡಿಸಲಾಗುತ್ತದೆ ಎಂಬ ಬೆದರಿಕೆ ಒಡ್ಡಿದ್ದರು ಎಂದು ಕೂಡ ಮಹಿಳೆ ದೂರಿದ್ದರು. ದೂರಿನ ಆಧಾರದಲ್ಲಿ ಶ್ರೇಯ್ ಅವರ ವಿರುದ್ಧ ಅತ್ಯಾಚಾರ ಹಾಗೂ ಸುಲಿಗೆ ಪ್ರಕರಣ ದಾಖಲಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಶ್ರೇಯ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ದೂರು ನೀಡಿರುವ ಮಹಿಳೆಯು ವಿಧವೆ. ಆರೋಪಿ ಶ್ರೇಯ್ ಅವರು 12–13 ವರ್ಷಗಳಿಂದ ಈ ಮಹಿಳೆಯ ಜೊತೆ ದೈಹಿಕ ಸಂಬಂಧ ಹೊಂದಿದ್ದಾರೆ. ಮಹಿಳೆಯ ಪತಿ ಬದುಕಿದ್ದಾಗಲೂ ಶ್ರೇಯ್ ಅವರು, ಮಹಿಳೆಯ ಜೊತೆ ದೈಹಿಕ ಸಂಬಂಧ ಹೊಂದಿದ್ದರು ಎಂದು ಕೋರ್ಟ್‌ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ದೂರುದಾರ ಮಹಿಳೆಯು ಶ್ರೇಯ್ ಅವರ ಮೇಲೆ ಅನುಚಿತ ಪ್ರಭಾವ ಬೀರಿದ್ದಾರೆ. ಆರೋಪಿಯು ಮಹಿಳೆಗಿಂತ ವಯಸ್ಸಿನಲ್ಲಿ ಚಿಕ್ಕವ. ಮಹಿಳೆಯ ಪತಿಗೆ ಸೇರಿದ ವಹಿವಾಟಿನಲ್ಲಿ ಕೆಲಸ ಮಾಡುತ್ತಿದ್ದವ ಎಂಬುದನ್ನು ಆದೇಶದಲ್ಲಿ ವಿವರಿಸಲಾಗಿದೆ.

ನಯೀಂ ಅಹಮದ್ ಮತ್ತು ಹರಿಯಾಣ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿ, ‘ಮದುವೆ ಆಗುವುದಾಗಿ ಭರವಸೆ ನೀಡಿ, ನಂತರ ಅದನ್ನು ಉಳಿಸಿಕೊಳ್ಳಲಾಗದ ಪ್ರತಿ ಪ್ರಕರಣವನ್ನೂ ‘ಸುಳ್ಳು ಭರವಸೆ’ ಎಂದು ಪರಿಗಣಿಸಿ, ವ್ಯಕ್ತಿಯನ್ನು ಶಿಕ್ಷೆಗೆ ಗುರಿಪಡಿಸುವುದು ವಿವೇಕದ ಕೆಲಸ ಆಗುವುದಿಲ್ಲ’ ಎಂದು ಹೈಕೋರ್ಟ್ ಹೇಳಿದೆ.

* ವಂಚನೆಯ ಉದ್ದೇಶವಿಲ್ಲದಿದ್ದರೆ ‘ಅತ್ಯಾಚಾರ’ ಅಲ್ಲ * ಮದುವೆ ಆಗುವ ಭರವಸೆಯನ್ನು ಈಡೇರಿಸಲಾಗದಿದ್ದ ಮಾತ್ರಕ್ಕೆ ಅದು ಅಪರಾಧ ಆಗದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.