ನವದೆಹಲಿ: ಭಾರತದಲ್ಲಿ ಇನ್ನು ಮುಂದೆ ಸಲಿಂಗಕಾಮ ಅಪರಾಧ ವಲ್ಲ, ಅಷ್ಟೇ ಅಲ್ಲ ಅದು ಮಾನಸಿಕ ಸಮಸ್ಯೆಯೂ ಅಲ್ಲ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ತೀರ್ಪು ನೀಡಿದೆ.ಬ್ರಿಟಿಷ್ ಕಾಲದ ಕಾನೂನನ್ನು ರದ್ದುಪಡಿಸುವ ಮೂಲಕ ಸಮಾನತೆಗೆ ಸಂಬಂಧಿಸಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.
2013ರಲ್ಲಿ ತಾನೇ ನೀಡಿದ ತೀರ್ಪನ್ನು ವಜಾ ಮಾಡಿದೆ. ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ ವಿವಾದಾತ್ಮಕವಾದ 377ನೇ ಸೆಕ್ಷನ್ ಅನ್ನು ಭಾಗಶಃ ರದ್ದು ಮಾಡಿದೆ. ಸಲಿಂಗಕಾಮದ ನಿಷೇಧ ಅತಾರ್ಕಿಕ, ಅಸಮರ್ಥನೀಯ ಮತ್ತು ಬಹಳ ಸ್ಪಷ್ಟವಾಗಿ ನಿರಂಕುಶ ನಿಲುವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಸ್ಪಷ್ಟವಾಗಿ ಹೇಳಿದೆ. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಘನತೆಯನ್ನು ಎತ್ತಿ ಹಿಡಿಯುವ ರೀತಿಯಲ್ಲಿ ‘ವ್ಯಕ್ತಿ ಇರುವ ಹಾಗೆಯೇ ಸ್ವೀಕರಿಸಿ’ ಎಂದು ಮಿಶ್ರಾ ಅವರು ಹೇಳಿದ್ದಾರೆ.
ದೇಶದಾದ್ಯಂತ ಇರುವ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಜನರ ಸಂಭ್ರಮ ಮೇರೆ ಮೀರಿದೆ. ಎಲ್ಲರನ್ನೂ ಒಳಗೊಳ್ಳುವ ಸಮಾನತೆಯ ಭಾರತ ನಿರ್ಮಾಣದತ್ತ ಇದು ಮಹತ್ವದ ಹೆಜ್ಜೆ ಎಂದು ಸಮುದಾಯದ ಸದಸ್ಯರು ಹೇಳಿಕೊಂಡಿದ್ದಾರೆ.
ಪೀಠವು ನಾಲ್ಕು ಪ್ರತ್ಯೇಕವಾದ ಆದರೆ ಸಹಮತದ ತೀರ್ಪುಗಳನ್ನು ಪ್ರಕಟಿಸಿದೆ. ಈವರೆಗೆ ಇದ್ದ ನಿಯಮವು ಸಮಾನತೆ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಉಲ್ಲಂಘಿಸಿತ್ತು ಎಂದು ಈ ತೀರ್ಪುಗಳು ಹೇಳಿವೆ.
ಸೆಕ್ಷನ್ 377ರ ಕೆಲವು ನಿಯಮ ಗಳನ್ನು ಬಳಸಿಕೊಂಡು ಸಲಿಂಗಕಾಮಿ ಮಹಿಳೆಯರು, ಪುರುಷರು, ದ್ವಿಲಿಂಗಾಸಕ್ತರು, ತೃತೀಯ ಲಿಂಗಿಗಳು, ವಿಶಿಷ್ಟ ಲೈಂಗಿಕತೆಯವರಿಗೆ (ಎಲ್‌ಜಿಬಿಟಿಕ್ಯು) ಕಿರುಕುಳ ಕೊಡಲಾಗಿದೆ. ಅವರನ್ನು ತಾರತಮ್ಯದಿಂದ ನೋಡಲಾಗಿದೆ.ಘನತೆ ಯಿಂದ ಬದುಕುವುದನ್ನು ಮೂಲಭೂತ ಹಕ್ಕು ಎಂದು ಸಂವಿಧಾನವು ಪರಿಗ ಣಿಸಿದೆ. ಹಾಗಾಗಿ ಪ್ರತಿ ವ್ಯಕ್ತಿಯ ಘನತೆಯನ್ನು ನ್ಯಾಯಾಲಯಗಳು ರಕ್ಷಿಸಬೇಕು. ದೇಹಕ್ಕೆ ಸಂಬಂಧಿಸಿದ ಲಕ್ಷಣಗಳ ಆಧಾರದಲ್ಲಿ ವ್ಯಕ್ತಿಯನ್ನು ತಾರತಮ್ಯದಿಂದ ನೋಡುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
‘ನಾವು ಇತಿಹಾಸವನ್ನು ಬದಲಾ ಯಿಸಲು ಸಾಧ್ಯವಿಲ್ಲ. ಆದರೆ, ಉತ್ತಮ ಭವಿಷ್ಯಕ್ಕೆ ಹಾದಿ ಸುಗಮಗೊಳಿಸಬಹುದು. ಎಲ್‌ಜಿಬಿಟಿಕ್ಯು ಹಕ್ಕುಗಳಿಗೆ ಸಂಬಂಧಿಸಿ ಅಂತರರಾಷ್ಟ್ರೀಯ ಒಪ್ಪಂದ ಗಳಿಗೆ ಭಾರತ ಸಹಿ ಮಾಡಿದೆ. ಹಾಗಾಗಿ ಅದಕ್ಕೆ ಬದ್ಧವಾಗಿರುವುದು ಭಾರತದ ಹೊಣೆಗಾರಿಕೆಯೂ ಹೌದು’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.
ನ್ಯಾಯಮೂರ್ತಿ ಖಾನ್ವಿಲ್ಕರ್ ಮತ್ತು ತಮ್ಮ ಪರವಾಗಿ ದೀಪಕ್ ಮಿಶ್ರಾ ಅವರು ತೀರ್ಪು ಬರೆದಿದ್ದಾರೆ. ಅನಿಸಿಕೆಯನ್ನು ಅಭಿವ್ಯಕ್ತಿಸುವುದಕ್ಕೆ ಅವಕಾಶ ದೊರೆ ಯದೇ ಇದ್ದರೆ ಅದು ಸಾವಿಗೆ ಸಮಾನ ಎಂದು ಅವರು ಹೇಳಿದ್ದಾರೆ.
‘ಲೈಂಗಿಕ ಅನುಭವದ ವೈವಿಧ್ಯಕ್ಕೆ ಸಂವಿಧಾನದ ರಕ್ಷಣೆ ಇದೆ. ವೈವಿಧ್ಯ ಮಯ ಸಂಸ್ಕೃತಿಗಳು, ಬಹುವಿಧ ಜೀವನ ಕ್ರಮಗಳು ಮತ್ತು ಪ್ರೀತಿ ಹಾಗೂ ಹಂಬಲದ ಅಸಂಖ್ಯ ರೀತಿಗಳ ನಡುವಿನಲ್ಲಿ ತಮ್ಮ ಸಂಬಂಧಗಳಲ್ಲಿ ಲೈಂಗಿಕ ಸಂತೃಪ್ತಿ ಪಡೆದುಕೊಳ್ಳುವಿಕೆಯು ಇಬ್ಬರು ಸಮ್ಮತಿಯ ವಯಸ್ಕರ ನಡುವಣ ಖಾಸಗಿ ವಿಚಾರವಾಗಿದೆ.
‘ಲೈಂಗಿಕ ಸಂಗಾತಿ ಯಾರಾಗಿರ ಬೇಕು ಎಂಬ ಆಯ್ಕೆ ಮತ್ತು ಈ ವಿಚಾರಕ್ಕಾಗಿ ತಾರತಮ್ಯಕ್ಕೆ ಒಳಗಾಗದಿರುವಿಕೆ ಎಲ್ಲವೂ ಲೈಂಗಿಕತೆಗೆ ಸಂವಿಧಾನವು ನೀಡುವ ರಕ್ಷಣೆಯ ಅಡಿಯಲ್ಲಿಯೇ ಬರುತ್ತವೆ’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.
**
ಪೂರ್ಣ ರದ್ದತಿ ಅಲ್ಲ
ಐಪಿಸಿಯ 377ನೇ ಸೆಕ್ಷನ್ ಅನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿಲ್ಲ. ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಲಾಗಿದೆ. ಆದರೆ, ಪ್ರಾಣಿಗಳ ಜತೆಗೆ ನಡೆಸುವ ಯಾವುದೇ ರೀತಿಯ ಲೈಂಗಿಕ ಸಂಪರ್ಕ ಮತ್ತು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು ಅಪರಾಧವಾಗಿಯೇ ಮುಂದುವರಿಯಲಿದೆ.
**
ಪ್ರಚಾರಕ್ಕೆ ಮನವಿ
ಎಲ್‌ಜಿಬಿಟಿಕ್ಯು ಸಮುದಾಯದ ಬಗ್ಗೆ ಇರುವ ಸಾಮಾಜಿಕ ಕಳಂಕವನ್ನು ತೊಡೆಯುವುದು ಎಲ್ಲಕ್ಕಿಂತ ಮುಖ್ಯ ಎಂದು ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಹೇಳಿದ್ದಾರೆ. ಈ ತೀರ್ಪಿಗೆ ಸಮೂಹ ಮಾಧ್ಯಮಗಳು ಗರಿಷ್ಠ ಪ್ರಚಾರ ನೀಡಬೇಕು ಎಂದು ಅವರು ಹೇಳಿದ್ದಾರೆ. ಈ ಸಮುದಾಯ ಅನುಭವಿಸುತ್ತಿರುವ ತಾರತಮ್ಯದ ಬಗ್ಗೆ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸರ್ಕಾರಕ್ಕೆ ನಾರಿಮನ್ ಸೂಚಿಸಿದರು.
**
ಅರ್ಜಿದಾರರು ಯಾರು?
ನಾಝ್ ಫೌಂಡೇಶನ್ ಜತೆಗೆ, ನರ್ತಕ ನವತೇಜ್ ಜೌಹರ್, ಪತ್ರಕರ್ತ ಸುನಿಲ್ ಮೆಹ್ರಾ, ಪಾಕ ತಜ್ಞೆ ರಿತು ದಾಲ್ಮಿಯಾ, ಹೋಟೆಲ್ ಉದ್ಯಮಿಗಳಾದ ಅಮನ್ ನಾಥ್ ಮತ್ತು ಕೇಶವ್ ಸೂರಿ ಮತ್ತು ಉದ್ಯಮಿ ಆಯೇಷಾ ಕಪೂರ್ ಮತ್ತು ಐಐಟಿಯ 20 ಹಾಲಿ ಮತ್ತು ಮಾಜಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಒಂದೇ ಲಿಂಗದ ಇಬ್ಬರು ವ್ಯಕ್ತಿಗಳ ನಡುವೆ ಸಮ್ಮತಿಯ ಲೈಂಗಿಕತೆಯನ್ನು ಅಪರಾಧ ಎಂದು ಪರಿಗಣಿಸುವ 158 ವರ್ಷ ಹಳೆಯ ನಿಯಮಗಳನ್ನು ರದ್ದುಪಡಿಸಬೇಕು ಎಂದು ಇವರು ಕೋರಿದ್ದರು.
**
ಹಕ್ಕುಗಳನ್ನು ನಿರಾಕರಿಸಿದ್ದಕ್ಕಾಗಿ, ನಿರಂತರವಾಗಿ ಭೀತಿಯಲ್ಲಿ ಬದುಕುವಂತೆ ಮಾಡಿದ್ದಕ್ಕಾಗಿ ಇತಿಹಾಸವು ಈ ಸಮುದಾಯದ ಕ್ಷಮೆ ಕೋರಬೇಕು
-ಇಂದೂ ಮಲ್ಹೋತ್ರಾ, ಸಂವಿಧಾನ ಪೀಠದ ಸದಸ್ಯೆ
**
ಸಂಬಂಧಪಟ್ಟ ಲೇಖನಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.