ADVERTISEMENT

ದೆಹಲಿಯಲ್ಲಿ ಶಾಶ್ವತವಾಗಿ ಪಟಾಕಿ ನಿಷೇಧ ಪರಿಗಣಿಸಿ: ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 15:57 IST
Last Updated 4 ನವೆಂಬರ್ 2024, 15:57 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ದೀಪಾವಳಿ ನಂತರ ದೆಹಲಿಯಲ್ಲಿ ವಾಯುಮಾಲಿನ್ಯ ಕಳವಳಕಾರಿ ಮಟ್ಟ ತಲುಪಿದ ಬೆನ್ನಲ್ಲೇ, ದೆಹಲಿಯಲ್ಲಿ ಶಾಶ್ವತವಾಗಿ ಪಟಾಕಿ ನಿಷೇಧ ಮಾಡುವ ವಿಷಯವನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ದೆಹಲಿ ಸರ್ಕಾರ ಮತ್ತು ಇತರ ಪ್ರಾಧಿಕಾರಗಳಿಗೆ ತಿಳಿಸಿದೆ.

ದೆಹಲಿಯಲ್ಲಿ ಪಟಾಕಿ ನಿಷೇಧ ಜಾರಿ ಆಗದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅಭಯ್‌ ಎಸ್‌. ಓಕಾ ಮತ್ತು ಆಗಸ್ಟಿನ್‌ ಜಾರ್ಜ್‌ ಮಸಿಹ್‌ ಅವರ ಪೀಠವು, ‘ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘನೆ ಆಗಿದೆ ಎಂಬುದು ಸ್ಪಷ್ಟವಾಗಿದೆ. ಜತೆಗೆ ದೀಪಾವಳಿ ಸಮಯದಲ್ಲಿ ಕೃಷಿ ತ್ಯಾಜ್ಯ ಸುಡುವುದೂ ಹೆಚ್ಚಾಗಿದೆ’ ಎಂದು ಬೇಸರ ವ್ಯಕ್ತಪಡಿಸಿತು.

ವಾರದಲ್ಲಿ ವರದಿ ಸಲ್ಲಿಸಲು ನಿರ್ದೇಶನ:

ADVERTISEMENT

ಈ ವರ್ಷ ದೀಪಾವಳಿ ಸಮಯದಲ್ಲಿ ದೆಹಲಿಯಲ್ಲಿ ಪಟಾಕಿ ನಿಷೇಧ ಜಾರಿಗೆ ತರಲು ತೆಗೆದುಕೊಂಡ ಕ್ರಮಗಳು ಮತ್ತು ಭವಿಷ್ಯದಲ್ಲಿ ತೆಗೆದುಕೊಳ್ಳುವ ಕ್ರಮಗಳ ಕುರಿತು ವಾರದೊಳಗೆ ವರದಿ ಸಲ್ಲಿಸುವಂತೆ ಪೀಠವು, ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸ್‌ ಕಮಿಷನರ್‌ಗೆ ನಿರ್ದೇಶನ ನೀಡಿತು. ಎಂ.ಸಿ.ಮೆಹ್ತಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

ದೆಹಲಿಯ ಕೆಲ ಭಾಗಗಳಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿತವಾಗಿದ್ದು, ಅಪಾಯಕಾರಿ ಪಿ.ಎಂ (ಪರ್ಟಿಕ್ಯುಲೇಟ್ ಮ್ಯಾಟರ್) 2.5 ಕಣಗಳು ಹೆಚ್ಚಾಗಿವೆ. ಇದರಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಮತ್ತು ವಿವಿಧ ಬಗೆಯ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಕಳೆದ ಎರಡು ವರ್ಷಗಳ ದೀಪಾವಳಿ ಸಮಯದಲ್ಲಿ ಮಾಲಿನ್ಯದ ಪ್ರಮಾಣ ಪಿ.ಎಂ 2.5ಗೆ ಹೋಲಿಸಿದರೆ ಈ ವರ್ಷದ ದೀಪಾವಳಿ ಮಧ್ಯರಾತ್ರಿಯ ಮಾಲಿನ್ಯದ ಪ್ರಮಾಣ ಶೇ 13ರಷ್ಟು ಅಧಿಕವಾಗಿದೆ. 2022ರ ದೀಪಾವಳಿ ಆಚರಣೆಗೆ ಹೋಲಿಸಿದರಂತೂ ಈ ವರ್ಷ ರಾತ್ರಿ ಪಿ.ಎಂ 2.5 ಮಟ್ಟ ಶೇ 34ರಷ್ಟು ಅಧಿಕ ಇರುವುದು ಸಿಎಸ್‌ಇ ಬಿಡುಗಡೆ ಮಾಡಿದ ವರದಿಯಿಂದ ಗೊತ್ತಾಗಿದೆ.

ಈ ವರದಿಯನ್ನು ಗಮನಿಸಿದ ಪೀಠವು, ವಾಯು ಮಾಲಿನ್ಯದ ಮಟ್ಟವು ಸಾರ್ವಕಾಲಿಕ ಕುಸಿತ ಕಂಡಿದೆ. 2022 ಮತ್ತು 2023ಕ್ಕಿಂತಲೂ ಕುಸಿತ ಪ್ರಮಾಣ ತೀವ್ರವಾಗಿದೆ ಎಂದು ತಿಳಿಸಿತು.

‘ದೆಹಲಿ ಸರ್ಕಾರವು ಪಟಾಕಿ ನಿಷೇಧ ಜಾರಿಗೆ ಸಂಬಂಧಿಸಿದಂತೆ ಹೊರಡಿಸಿದ ಆದೇಶಗಳೂ ಸೇರಿದಂತೆ ತೆಗೆದುಕೊಂಡ ಪ್ರತಿ ಕ್ರಮಗಳ ಕುರಿತ ಪ್ರಮಾಣ ಪತ್ರ ಸಲ್ಲಿಸುವಂತೆ’ ಪೀಠ ಸೂಚಿಸಿತು.

ಪಂಜಾಬ್‌, ಹರಿಯಾಣಕ್ಕೂ ನಿರ್ದೇಶನ:

ಹಿಂದಿನ 10 ದಿನಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಸುಟ್ಟ ಮಾಹಿತಿಯನ್ನು ಒಳಗೊಂಡ ಪ್ರಮಾಣ ಪತ್ರ ಸಲ್ಲಿಸುವಂತೆ ಪೀಠವು ಹರಿಯಾಣ ಮತ್ತು ಪಂಜಾಬ್‌ ಸರ್ಕಾರಗಳಿಗೂ ನಿರ್ದೇಶನ ನೀಡಿ, ವಿಚಾರಣೆಯನ್ನು ಇದೇ 14ಕ್ಕೆ ಮುಂದೂಡಿತು.

ಮುಂದಿನ ಕೆಲ ತಿಂಗಳಲ್ಲಿ ಬರಲಿರುವ ವಿವಾಹ ಋತುವಿನಲ್ಲೂ ಪಟಾಕಿ ನಿಷೇಧವನ್ನು ವಿಸ್ತರಿಸಬೇಕು ಎಂದು ವಕೀಲರು ಸಲಹೆ ನೀಡಿದರು. ‘ಇತರ ಹಬ್ಬಗಳ ಸಂದರ್ಭ, ಮದುವೆಗಳು, ಚುನಾವಣೆಗಳ ಸಮಯದಲ್ಲೂ ಇದನ್ನು ಜಾರಿಗೆ ತರಲು ನಾವೂ ಬಯಸುತ್ತೇವೆ ಮತ್ತು ಪ್ರಸ್ತಾಪಿಸುತ್ತೇವೆ. ಆದರೆ ಅದಕ್ಕೂ ಮುನ್ನ, ಈ ಕುರಿತು ಹೊರಡಿಸಲಾದ ಆದೇಶಗಳ ಸ್ವರೂಪವನ್ನು ನೋಡಬಯಸುತ್ತೇವೆ’ ಎಂದು ಪೀಠ ಹೇಳಿತು.

ಪಟಾಕಿ ನಿಷೇಧವು ದೆಹಲಿ ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಜಾರಿಯಾಗಿಲ್ಲ ಎಂಬ ಸುದ್ದಿಗಳು ವ್ಯಾಪಕವಾಗಿ ಬಿತ್ತರವಾಗಿವೆ ಎಂದ ಪೀಠ, ಪಟಾಕಿಗಳ ಬಳಕೆಯನ್ನು ನಿಷೇಧಿಸುವ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿ ಹೇಳಿತು. ಅಲ್ಲದೆ ಕನಿಷ್ಠ ಮುಂದಿನ ವರ್ಷವಾದರೂ (2025) ವಾಯುಮಾಲಿನ್ಯ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.