ADVERTISEMENT

ಕ್ರಿಮಿನಲ್ ಪಿತೂರಿ: 'ಪಿಎಂಎಲ್‌ ಕಾಯ್ದೆಯಲ್ಲಿ ಉಲ್ಲೇಖವಾದರಷ್ಟೇ ಅನುಸೂಚಿತ ಅಪರಾಧ'

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 20:32 IST
Last Updated 29 ನವೆಂಬರ್ 2023, 20:32 IST
–
   

ನವದೆಹಲಿ: ಐಪಿಸಿಯ ಸೆಕ್ಷನ್‌ 120ಬಿ ಅಡಿ ಶಿಕ್ಷಾರ್ಹವಾಗುವ ಕ್ರಿಮಿನಲ್‌ ಪಿತೂರಿಯಂತಹ ಅಪರಾಧವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಲ್ಲಿ (ಪಿಎಂಎಲ್‌ಎ) ಉಲ್ಲೇಖಿಸಿದ ಅಪರಾಧಕ್ಕೆ ಸಂಬಂಧಪಟ್ಟಿರುವುದು ಆಗಿದ್ದಾಗ ಮಾತ್ರ ಅದು ಅನುಸೂಚಿತ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಅಭಯ್‌ ಎಸ್‌.ಓಕಾ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.

ಪವನ ದಿಬ್ಬೂರು ಎಂಬುವವರು ಬೆಂಗಳೂರಿನಲ್ಲಿ ಅಲಯನ್ಸ್‌ ಬ್ಯುಸಿನೆಸ್‌ ಸ್ಕೂಲ್‌ನ ಆಸ್ತಿಯನ್ನು ₹ 13.05 ಕೋಟಿಗೆ ಹಾಗೂ ಮಧುಕರ್‌ ಅಂಗೂರ್‌ ಅವರ ಆಸ್ತಿಯನ್ನು ₹ 2.47 ಕೋಟಿಗೆ ಖರೀದಿಸಲು ಕ್ರಿಮಿನಲ್‌ ಸಂಚು ರೂಪಿಸಿದ್ದರು. ಇದರ ಆಧಾರದ ಮೇಲೆ ಪವನ ವಿರುದ್ಧ ಹಣದ ಅಕ್ರಮ ವರ್ಗಾವಣೆ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಕ್ಕೆ ಜಾರಿ ನಿರ್ದೇಶನಾಲಯ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಪವನ ದಿಬ್ಬೂರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.

ADVERTISEMENT

ಅನುಸೂಚಿತ ಅಪರಾಧಕ್ಕೆ ಸಂಬಂಧಿಸಿ ದಾಖಲಿಸಿರುವ ಆರೋಪಪಟ್ಟಿಗಳಲ್ಲಿ, ಅನುಸೂಚಿಯಲ್ಲಿ ಸೇರಿಸಲಾದ ಅಪರಾಧಗಳನ್ನು ಎಸಗುವುದಕ್ಕಾಗಿ ಕ್ರಿಮಿನಲ್‌ ಸಂಚು ರೂಪಿಸಲಾಗಿತ್ತು ಎಂಬ ಆರೋಪವನ್ನು ಪ್ರಸ್ತಾಪಿಸಿಲ್ಲ. ಅಲ್ಲದೇ, ಐಪಿಸಿ ಸೆಕ್ಷನ್‌ 120ಬಿ ಹೊರತುಪಡಿಸಿ ಅನುಸೂಚಿಯಲ್ಲಿನ ಇತರ ಯಾವುದೇ ಅಪರಾಧವನ್ನು ಗುರುತಿಸಿಲ್ಲ. ಈ ಪ್ರಕರಣದಲ್ಲಿ ಅನುಸೂಚಿತ ಅಪರಾಧದ ಪ್ರಶ್ನೆಯೇ ಉದ್ಭವಿಸದ ಕಾರಣ, ಪಿಎಂಎಲ್‌ಎ ಸೆಕ್ಷನ್ 3ರಡಿ ಶಿಕ್ಷಾರ್ಹ ಅಪರಾಧಕ್ಕಾಗಿ ಅರ್ಜಿದಾರನ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.